ಹಾಸನ : ಹಾಸನದಲ್ಲಿ, ಜೀತ ಪದ್ಧತಿಯಡಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಮಾನವೀಯತೆಯನ್ನು ಮರೆತಿರುವ ಜೀತಪದ್ದತಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತಂದು, ಯಾವುದೇ ಸಂಬಳ ನೀಡದೇ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ ಆರೋಪದಡಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿ 18 ಮಂದಿಯನ್ನು ಜೀತದಿಂದ ಮುಕ್ತಗೊಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ (ಎಎಸ್ಪಿ) ತಮ್ಮಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಜೀತದಲ್ಲಿದ್ದ 18 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಈ ಜೀತಪದ್ದತಿ ಬೇಲೂರು ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆಯುತ್ತಿತ್ತು . ನಾಗರಾಜ್ ಮತ್ತು ಮೋಹನೇಶ್ ಎಂಬವರು ಕಾರ್ಮಿಕರನ್ನು ಒಂದೇ ಶೆಡ್‌ನಲ್ಲಿ ಅಕ್ರಮವಾಗಿ ಬಂಧಿಸಿ, ಮೂಲಭೂತ ಸೌಲಭ್ಯಗಳಿಲ್ಲದೆ ಅಮಾನವೀಯವಾಗಿ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿತ್ತು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಸಿ, ರಾತ್ರಿ ಮತ್ತೆ ಶೆಡ್‌ಗೆ ಕರೆತಂದು ಇಡಲಾಗುತ್ತಿತ್ತು. ಹೊರಗಿನವರ ಸಂಪರ್ಕವಾಗದಂತೆ ಕಠಿಣ ನಿಗಾವಹಿಸಿ, ಕಾರ್ಮಿಕರನ್ನು ಭೀತಿಯಲ್ಲಿಟ್ಟಿದ್ದರು ಎನ್ನಲಾಗಿದೆ. ಆರೋಪಿಗಳು ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯವಿಲ್ಲದೆ ಇದ್ದ ಜನರನ್ನು ಗುರುತಿಸಿ, ಕೆಲಸ ನೀಡುವ ನೆಪದಲ್ಲಿ ಕರೆತಂದು ಹಣ ನೀಡದೆ ದುಡಿಸಿಕೊಳ್ಳುತ್ತಿದ್ದರು ಎಂಬುದು ಬಹಿರಂಗವಾಗಿದೆ. ಒಂದೇ ಶೆಡ್‌ನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜನರು ನರಕಸದೃಶ ಜೀವನ ನಡೆಸುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.