image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸರ್ಕಾರದಿಂದ 56,000 ಹುದ್ದೆಗಳ ನೇಮಕಾತಿ ಘೋಷಣೆ!

ಸರ್ಕಾರದಿಂದ 56,000 ಹುದ್ದೆಗಳ ನೇಮಕಾತಿ ಘೋಷಣೆ!

ಧಾರವಾಡ : ಧಾರವಾಡದಲ್ಲಿ ಮಂಗಳವಾರ ನಡೆದ ಉದ್ಯೋಗ ಆಕಾಂಕ್ಷಿಗಳ ಪ್ರತಿಭಟನೆ ರಾಜ್ಯಾದ್ಯಂತ ಚರ್ಚೆಯ ವಿಚಾರವಾಗಿದೆ. ಈ ಪ್ರತಿಭಟನೆ ಸಂದರ್ಭದಲ್ಲಿಯೇ ಸರ್ಕಾರ 56,000 ಹುದ್ದೆಗಳ ನೇಮಕಾತಿ ಘೋಷಣೆಯನ್ನು ಮಾಡಿದೆ. ಧಾರವಾಡದ ಕರ್ನಾಟಕ ಕಾಲೇಜು (ಕೆಸಿಡಿ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಕೌಶಲ್ಯ ಮಿಶನ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು. ಈ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, "ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದಾದ್ಯಂತ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗಾವಕಾಶಗಳಿಗಾಗಿ ನಿರೀಕ್ಷೆಯಲ್ಲಿರುವ ಯುವಕರಿಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ" ಎಂದು ಹೇಳಿದರು.

"ಸರ್ಕಾರ ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಬದ್ಧವಾಗಿದ್ದು, ಈಗಾಗಲೇ 40,000ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಉದ್ಯೋಗದಾತರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸುವುದು ಉದ್ಯೋಗ ಮೇಳಗಳ ಮುಖ್ಯ ಉದ್ದೇಶವಾಗಿದೆ" ಎಂದರು. ಸಚಿವ ಸಂತೋಷ್ ಲಾಡ್, "ಸರ್ಕಾರವು ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, 56,000 ಹೊಸ ಹುದ್ದೆಗಳ ನೇಮಕಾತಿಗೆ ತೀರ್ಮಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಬಜೆಟ್‍ನಲ್ಲಿ ತೆಗೆದುಕೊಂಡು ನಿರ್ಣಯ ಮಾಡಿದ್ದಾರೆ" ಎಂದು ಹೇಳಿದರು. "ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರ ನಿರಂತರ ಪ್ರಯತ್ನಿಸುತ್ತಿದ್ದು, ಯುವಕರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಸಚಿವ ಸಂತೋಷ ಲಾಡ್ ಕರೆ ನೀಡಿದರು.

ಧಾರವಾಡದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 3,085 ಅಭ್ಯರ್ಥಿಗಳು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ 122 ಕಂಪನಿಗಳು ಮೇಳದಲ್ಲಿ ಹಾಜರಾಗಿ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದರು. ಪ್ರಾಥಮಿಕ ಹಂತದ ಪರಿಶೀಲನೆ ನಂತರ 1,253 ಅಭ್ಯರ್ಥಿಗಳು ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದು, ಅಂತಿಮವಾಗಿ 719 ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿ, ಸ್ಥಳದಲ್ಲಿಯೇ ಆಫರ್ ಲೇಟರ್ ನೀಡಲಾಗಿದೆ. ಉದ್ಯೋಗ ಮೇಳದಲ್ಲಿ ಐಟಿ, ಉತ್ಪಾದನಾ ಕ್ಷೇತ್ರ, ಮಾರಾಟ, ಬ್ಯಾಂಕಿಂಗ್, ಶಿಕ್ಷಣ ಸೇರಿದಂತೆ ಹಲವು ವಿಭಾಗಗಳ ಕಂಪನಿಗಳು ಭಾಗವಹಿಸಿದ್ದವು. ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ವಿವಿಧ ಸಂಸ್ಥೆಗಳ ಸಂದರ್ಶನದಲ್ಲಿ ಪಾಲ್ಗೊಂಡರು.

Category
ಕರಾವಳಿ ತರಂಗಿಣಿ