ಬೆಂಗಳೂರು : ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ ನಿರ್ಲಕ್ಷಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಪ್ರಕಟಿಸಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿಮೋಫಿಲಿಯಾ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ನೆಹರೂ ತಾರಾಲಯದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೇವಲ ಉರ್ದುವಿನಲ್ಲಿ ಮುದ್ರಿಸಲಾಗಿದೆ ಎನ್ನಲಾಗಿದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಆಡಳಿತ ಭಾಷೆ ಕನ್ನಡವನ್ನೇ ಮರೆತುಬಿಟ್ಟಿದೆಯೇ, ಅಥವಾ ಯಾವುದಾದರೂ ಒಂದು ಸಮುದಾಯವನ್ನು ಓಲೈಸುವ ರಾಜಕಾರಣಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕರ್ನಾಟಕ ರಾಜ್ಯ ಅಧಿಕೃತ ಭಾಷಾ ಕಾಯ್ದೆಯ ಅನ್ವಯ, ಸರ್ಕಾರವು ಆಹ್ವಾನ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸುವುದು ಶಿಷ್ಟಾಚಾರವಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇಲಾಖೆಯ ಈ ನಡೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುವ ಪ್ರಯತ್ನ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಉರ್ದು ಭಾಷೆ ಮಾತನಾಡುವವರು ಕರ್ನಾಟಕದಲ್ಲಿ ಇಲ್ಲವೇ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ. ಆದರೆ, ರಾಜ್ಯದಲ್ಲಿ ಉರ್ದು ಮಾತನಾಡುವವರಷ್ಟೇ ಅಲ್ಲದೆ, ತುಳು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹೀಗಿರುವಾಗ, ಸರ್ಕಾರವು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ, ಆಯಾ ಭಾಷೆಗಳಲ್ಲೂ ಆಹ್ವಾನ ಪತ್ರಿಕೆಗಳನ್ನು ಪ್ರಕಟಿಸಬೇಕಾಗಿತ್ತು ಎಂಬ ವಾದ ಕೂಡ ಕೇಳಿಬಂದಿದೆ. ಕೇವಲ ಉರ್ದುವಿನಲ್ಲಿ ಮಾತ್ರ ಪ್ರಕಟಿಸಿದ್ದು, ಸರ್ಕಾರದ ಉದ್ದೇಶದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿವೆ. ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವ ಬದಲು, ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ಸರ್ಕಾರ ನಿರತವಾಗಿದೆ ಎಂದು ಆರೋಪಿಸಿವೆ.