ಬೆಂಗಳೂರು : 2025ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ವಿವಿಧ ಭಾಗಗಳ ಯುವ ಪ್ರತಿಭೆಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 83 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ್ದು, ಇದರಲ್ಲಿ ಶಿರಸಿ ಮೂಲದ ಸುಮಂತ್ ಮಂಜುನಾಥ್ ನಾಯ್ಕ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಗಮನ ಸೆಳೆದರೆ, ಧಾರವಾಡದ ಮೂವರು ಯುವ ವಕೀಲರು ನ್ಯಾಯಪೀಠ ಅಲಂಕರಿಸಲು ಸಜ್ಜಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ್, ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಮಲೆನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ವಿಶೇಷವೆಂದರೆ ಸುಮಂತ್ ತಮ್ಮ ಮೊದಲ ಪ್ರಯತ್ನದಲ್ಲೇ ಈ ಅಪ್ರತಿಮ ಯಶಸ್ಸು ಕಂಡಿದ್ದಾರೆ. ಧಾರವಾಡ ವಕೀಲರ ಸಂಘದ ಮೂವರು ಸದಸ್ಯರು ಅತ್ಯಂತ ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಜೀವ್ ಜೋಶಿ ಅವರ ಪುತ್ರರಾದ ಅನಿರುದ್ಧ ರಾಜೀವ್ ಜೋಶಿ (25) ರಾಜ್ಯಕ್ಕೆ 17ನೇ ರ್‍ಯಾಂಕ್ ಪಡೆದಿದ್ದಾರೆ. ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ 3 ಚಿನ್ನದ ಪದಕಗಳೊಂದಿಗೆ ಪದವಿ ಪಡೆದಿದ್ದ ಇವರು, ತಂದೆಯ ಹಾದಿಯಲ್ಲೇ ಸಾಗಿ ನ್ಯಾಯಾಂಗದ ಸೇವೆಗೆ ಸಿದ್ಧರಾಗಿದ್ದಾರೆ. ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ರೈತ ಕುಟುಂಬದ ಮಗಳಾದ ಸುಧಾ, ಪಟ್ಟ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಮೊದಲ ಯತ್ನದಲ್ಲೇ ರಾಜ್ಯಕ್ಕೆ 27ನೇ ರ್‍ಯಾಂಕ್ ಪಡೆದಿರುವ ಸುಧಾ, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಅತಿದೊಡ್ಡ ಸ್ಫೂರ್ತಿಯಾಗಿದ್ದಾರೆ. 24ರ ಹರೆಯದಲ್ಲೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಇವರ ಸಾಧನೆಯ ಹಿರಿಮೆ. ಹಾನಗಲ್ ಮೂಲದ, ಹುಬ್ಬಳ್ಳಿ ನಿವಾಸಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪುತ್ರಿಯಾದ ಋತೇಜಾ ರಾಜ್ಯಕ್ಕೆ 53ನೇ ರ್‍ಯಾಂಕ್ ಪಡೆದಿದ್ದಾರೆ. 2024ರಲ್ಲಿ ಎಲ್‌ಎಲ್‌ಎಂ ಮುಗಿಸಿ ಎರಡನೇ ಪ್ರಯತ್ನದಲ್ಲಿ ಈ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ನ್ಯಾಯಾಂಗ ಇಲಾಖೆಯು 2025ನೇ ಸಾಲಿನಲ್ಲಿ ನಡೆಸಿದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಕೆಯ್ಯರು ಗ್ರಾಮದ ಇಳಂತಾಜೆಯ ದೀಪಿಕಾ ಎಸ್. ಶೆಟ್ಟಿ ಅವರು ರಾಜ್ಯಕ್ಕೆ 4ನೇ ಬ್ಯಾಂಕ್ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿ ಈ ಹಿಂದೆ 30-35ರ ಹರೆಯದಲ್ಲಿ ನ್ಯಾಯಾಧೀಶರಾಗುವುದು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ 24-25 ವರ್ಷದ ಯುವಕ-ಯುವತಿಯರು ನ್ಯಾಯಪೀಠ ಏರುತ್ತಿರುವುದು ವ್ಯವಸ್ಥೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಅದರಲ್ಲೂ ರೈತ ಕುಟುಂಬದ ಪ್ರತಿಭೆಗಳು ಮತ್ತು ಕಿರಿಯ ವಯಸ್ಸಿನಲ್ಲೇ ಗೋಲ್ಡ್ ಮೆಡಲ್ ಪಡೆದವರು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ರಾಜ್ಯದ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ನಿವೃತ್ತ ನ್ಯಾಯಾಧೀಶರೊಬ್ಬರು ತಿಳಿಸಿದ್ದಾರೆ.