ಬೆಂಗಳೂರು : ರಾಜ್ಯದ ಶಕ್ತಿ ಸೌಧ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇತ್ತೀಚಿಗೆ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ನಗದು ಮತ್ತು 300 ಗ್ರಾಂ ಚಿನ್ನ ಕಳ್ಳತನವಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಿಬ್ಬಂದಿ ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿತ್ತು. ಶಕ್ತಿ ಸೌಧದಲ್ಲಿ ಭದ್ರತಾ ಲೋಪದ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಮಾಧ್ಯಮಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿದ್ದು, ಮಾಧ್ಯಮಗಳಿಗೆ ರಾಜಕೀಯ ನಾಯಕರ ಸಂದರ್ಶನ ಮಾಡುವುದು ಹಾಗೂ ವಿಧಾನಸೌಧಕ್ಕೆ ಪ್ರವೇಶ ಮಾಡುವ ಕುರಿತಾಗಿ ಕೆಲವೊಂದು ನಿರ್ಬಂಧಗಳನ್ನು ಹೇರಿದೆ. ಇದು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ನಿರ್ಬಂಧ ಹೇರುವ ಮೂಲಕ ವಿಧಾನಸೌಧದ ಆವರಣದಿಂದ ಮಾಧ್ಯಮಗಳನ್ನು ದೂರ ಇಡುವ ಪ್ರಯತ್ನ ಇದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಧಾನಸೌಧದಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿಯೇ ಬೈಟ್ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ, ವಿಧಾನಸೌಧದಲ್ಲಿ ರಾಜಕೀಯ ನಾಯಕರನ್ನು ಬೇರೆ ಸ್ಥಳದಲ್ಲಿ ಮಾತನಾಡಿಸುವಂತಿಲ್ಲ ಎಂದು ವಾರ್ತಾ ಇಲಾಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪತ್ರ ಬರೆದಿದೆ. ಇದು ಭದ್ರತೆಯ ನೆಪದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರದ ಸವಾರಿ ಎಂದೇ ಚರ್ಚೆಗೊಳಗಾಗುತ್ತಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ಕಾರದಿಂದಲೇ ಧಕ್ಕೆ ಉಂಟಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಳೆದ ವಾರ ವಿಧಾನಸೌಧದಲ್ಲಿ ನಡೆದ ಕಳ್ಳತನ ಪ್ರಕರಣ ಅನುಮಾನಕ್ಕೆ ಕಾರಣವಾಗಿತ್ತು. ವಿಧಾನಸೌಧದಲ್ಲಿ ಭದ್ರತಾ ಲೋಪದ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿದ್ದವು. ತನ್ನ ಲೋಪ ದೋಷಗಳನ್ನು ಮುಚ್ಚಿಕೊಳ್ಳಲು ಸಿಬ್ಬಂದಿ ಸುಧಾರಣಾ ಇಲಾಖೆ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.