ಚಿಕ್ಕಮಗಳೂರು : ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೋಮು ಘರ್ಷಣೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಿಂದಾಗಿ ಎರಡೂ ಕೋಮಿನ ಯುವಕರು ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಕೋಮು ಘರ್ಷಣೆ ಉಂಟಾಗಿದ್ದು, ಜನರು ರಾತ್ರೋರಾತ್ರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಮಧ್ಯರಾತ್ರಿ ಇಡೀ ಚಿಕ್ಕಮಗಳೂರು ನಗರ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿತ್ತು.
ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಬಡಾವಣೆಯಲ್ಲಿನ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಐದರಿಂದ ಆರು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಹೆಣ್ಣು ಮಕ್ಕಳ ಹಿಂದೆ ಹೋಗೋದು, ಕಲ್ಲು ಹೊಡೆಯೋದು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ಇಬ್ಬರನ್ನು ಹಿಡಿದ ಹಿಂದೂ ಸಂಘಟನೆಯವರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಹಲ್ಲೆ ವಿಷಯ ತಿಳಿಯುತ್ತಿದ್ದಂತೆ ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಎರಡೂ ಕೋಮಿನ ನೂರಾರು ಯುವಕರ ಜಮಾವಣೆಗೊಂಡಿದ್ದರು. ಹಲ್ಲೆಗೊಳಗಾದವರು ಕಲ್ಲು ಹೊಡೆದಿಲ್ಲ. ಹಲ್ಲೆ ನಡೆಸಿದವರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು ಎಂದು ಒಂದು ಕೋಮಿನ ಯುವಕರು ಆಗ್ರಹಿಸಿದ್ದಾರೆ. ಇತ್ತ ಆಸ್ಪತ್ರೆ ಮುಂದೆಯೂ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಹಲ್ಲೆಗೊಳಗಾದ ಯುವಕರಿಗೆ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಎರಡೂ ಕೋಮಿನ ಯುವಕರನ್ನ ಕಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಪೊಲೀಸರ ಭರವಸೆ ನೀಡುತ್ತಿದ್ದಂತೆ ಜನರು ಹಿಂದಿರುಗಿದ್ದಾರೆ ಎಂದು ವರದೊಯಾಗಿದೆ.