ಬೆಂಗಳೂರು: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕೆ ದಾಖಲೆಯ 4.09 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದ್ದರೂ ಸರಕಾರದ ಸ್ವಂತ ತೆರಿಗೆ ಮೂಲಗಳಿಂದ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹವಾಗುವುದು ಕಷ್ಟಸಾಧ್ಯವೆನಿಸಿದೆ.ಗುರಿ ತಲುಪಲು ಮಾರ್ಚ್ ಅಂತ್ಯದೊಳಗೆ 48,306 ಕೋಟಿ ರೂ.ಸಂಗ್ರಹವಾಗಬೇಕಿದ್ದು, ಅಬಕಾರಿ ಇಲಾಖೆ ಹೊರತುಪಡಿಸಿ ಉಳಿದ ಮೂರು ಮೂಲಗಳಿಂದ ವಾರ್ಷಿಕ ಗುರಿ ಸಾಧನೆ ಅನುಮಾನವೆನಿಸಿದೆ. ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆಯಿಂದ ಸುಮಾರು 15,000 ಕೋಟಿ ರೂ.ನಷ್ಟು ಆದಾಯ ಕೈತಪ್ಪುವ ಲಕ್ಷಣ ಕಾಣುತ್ತಿದೆ. ಇದು ಸರಕಾರದ ವೆಚ್ಚ, ಬಜೆಟ್ ಗಾತ್ರದ ಮೇಲೆ ಪರಿಣಾಮ ಬೀರಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ 83,200 ಕೋಟಿ ರೂ. ವಿನಿಯೋಗಿಸುವುದಾಗಿ ಸರಕಾರ ಹೇಳುತ್ತಿದ್ದರೂ ತೆರಿಗೆ ಆದಾಯ ತಗ್ಗಿದರೆ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗುವ ಅನುದಾನ ಕಡಿತವಾಗಲಿದೆ ಎಂದು ಸರಕಾರದ ಮೂಲಗಳಿಂದ ತಿಳಿದು ಬಂದಿದೆ.
ಅಬಕಾರಿ ಇಲಾಖೆಯಿಂದ ಮಾತ್ರ ಪ್ರಸಕ್ತ ಸಾಲಿನ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹ ನಿರೀಕ್ಷೆ ಇದೆ. 40,000 ಕೋಟಿ ರೂ. ವಾರ್ಷಿಕ ಗುರಿಯಡಿ ಜನವರಿ ಅಂತ್ಯಕ್ಕೆ 33,371ಕೋಟಿ ರೂ. ಸಂಗ್ರಹವಾಗಿದೆ. ಕಳೆದ 2024-25ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ 29,460 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ಹಿಂದಿನ ಸಾಲಿಗೆ ಹೋಲಿಸಿದರೆ ಶೇ.13.27ರಷ್ಟು ಬೆಳವಣಿಗೆ ಸಾಧಿಸಿದೆ. ಮಾಸಿಕ ಸರಾಸರಿ 3,000 ಕೋಟಿ ರೂ. ಆದಾಯ ಸಂಗ್ರಹದಿಂದಾಗಿ ಮಾರ್ಚ್ ಅಂತ್ಯದ ವೇಳೆಗೆ ಗುರಿ ಮೀರಿ ಸಾಧನೆಯಾಗುವ ವಿಶ್ವಾಸವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ತೆರಿಗೆ ಮೂಲದಿಂದ ಜನವರಿ ಅಂತ್ಯದವರೆಗೆ 90,229 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿಯಿಂದ 66,605 ಕೋಟಿ ರೂ., ಮಾರಾಟ ತೆರಿಗೆಯಿಂದ 22,387 ಕೋಟಿ ರೂ. ಹಾಗೂ ವೃತ್ತಿ ತೆರಿಗೆಯಿಂದ 1,236 ಕೋಟಿ ರೂ. ಬೊಕ್ಕಸಕ್ಕೆ ಬಂದಿದೆ. ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್ 22ರಿಂದ ನಾಲ್ಕು ಶ್ರೇಣಿಯ ಜಿಎಸ್‌ಟಿ ಬದಲಿಗೆ ಎರಡೇ ಶ್ರೇಣಿಯ ದರಗಳನ್ನು ಜಾರಿಗೊಳಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ ವಾಣಿಜ್ಯ ತೆರಿಗೆಯಿಂದ ವಾರ್ಷಿಕ 9,000 ಕೋಟಿ ರೂ. ನಷ್ಟ ಉಂಟಾಗುವ ಆತಂಕವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿದಂತೆ ಇತರೆ ಶುಲ್ಕ ರೂಪದಲ್ಲಿ ಜನವರಿವರೆಗೆ 20,500 ಕೋಟಿ ರೂ. ಆದಾಯ ಗಳಿಸಿದೆ. ಬಾಕಿ ಎರಡು ತಿಂಗಳಲ್ಲಿ 7,500 ಕೋಟಿ ರೂ. ಸಂಗ್ರಹ ಅಸಾಧ್ಯವೆನಿಸಿದ್ದು, 3,000 ಕೋಟಿ ರೂ.ನಷ್ಟು ಆದಾಯ ಕೈತಪ್ಪುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಸರಕಾರ ತನ್ನ ತೆರಿಗೆ ಹಾಗೂ ತೆರಿಗೆಯೇತರ ಆದಾಯ, ಕೇಂದ್ರ ಸರಕಾರದ ಸಹಾಯಾನುದಾನ ಹಾಗೂ ಸಾಲ ಮೊತ್ತವನ್ನು ಆಧರಿಸಿ ವೆಚ್ಚದ ಬಾಬ್ತಿನ ನಿರ್ವಹಣೆ ಮಾಡುತ್ತದೆ. ತೆರಿಗೆ ಆದಾಯ ಖೋತಾ ಆದರೆ ಬಜೆಟ್ ಗಾತ್ರ ಪರಿಷ್ಕರಣೆ ಅನಿವಾರ್ಯವಾಗಲಿದೆ. ಸ್ವಂತ ತೆರಿಗೆ ಮೂಲದಿಂದ 15,000 ಕೋಟಿ ರೂ.ಗಿಂತ ಹೆಚ್ಚು ಆದಾಯ ಕೈತಪ್ಪಿದರೆ ಅದರ ನೇರ ಪರಿಣಾಮ ಅಭಿವೃದ್ಧಿ ಕಾರ್ಯಗಳ ಮೇಲೆ ಬೀಳಲಿದೆ.