ಬೆಂಗಳೂರು : ಲೋಕಾಯುಕ್ತ ವಿಶೇಷ ಪೊಲೀಸ್ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಸ್ವಪ್ರತಿಷ್ಠೆಗೆ ಅಂಟಿಕೊಳ್ಳದೆ, ಪರಸ್ಪರ ಚರ್ಚಿಸುವ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಅವರಿಗೆ ಹೈಕೋರ್ಟ್ ಸಲಹೆ ನೀಡಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕುಮಾರಸ್ವಾಮಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಪ್ರಕರಣದಲ್ಲಿ ದೂರುದಾರರಾದ ಚಂದ್ರಶೇಖರ್ ಅವರಿಗೆ ಕುಮಾರಸ್ವಾಮಿ ಅವರು ಬೆದರಿಕೆ ಹಾಕಿಲ್ಲ. ಅವರಿಬ್ಬರ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಕುಮಾರಸ್ವಾಮಿ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದನ್ನು ಆಧರಿಸಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಮತ್ತು ದೂರುದಾರರ ಹಿತದೃಷ್ಟಿಯಿಂದ ಒಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರು. ಸಾರ್ವಜನಿಕ ಜೀವನದಲ್ಲಿ ಇಂಥ ಪ್ರಕರಣಗಳು ಎದುರಾಗುವುದು ಸಹಜ. ಮುಂದೆ ಎಲ್ಲಿಯಾದರೂ ಈ ಇಬ್ಬರು ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ, ಇಬ್ಬರೂ ಸ್ವ-ಪ್ರತಿಷ್ಠೆ ಬಿಟ್ಟು, ಪರಸ್ಪರ ಚರ್ಚಿಸಿ, ರಾಜಿ ಸಂಧಾನ ಮಾಡಿಕೊಂಡು ಪ್ರಕರಣವನ್ನು ಹಿಂಪಡೆಯುವುದು ಸೂಕ್ತ ಎಂದು ತಿಳಿಸಿದರು. ಚರ್ಚೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ದೂರುದಾರರು ಮತ್ತು ಅರ್ಜಿದಾರರು ಮುಕ್ತ ಮನಸ್ಸಿನಿಂದ ಮಾತನಾಡಲಿ. ಈ ಪ್ರಕರಣ ಮುಂದುವರಿಸುವುದರಿಂದ ಇಬ್ಬರಿಗೂ ಯಾವುದೇ ಲಾಭವಿಲ್ಲ. ಕೇವಲ ಮಾಧ್ಯಮಗಳಿಗೆ ಸುದ್ದಿಯಾಗುತ್ತದೆ ಅಷ್ಟೇ ಎಂದರು. ಅದಕ್ಕೆ ಸಮ್ಮತಿಸಿದ ಹಸ್ಮತ್ ಪಾಷಾ, ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದ ಸಲಹೆಯನ್ನು ತಿಳಿಸುವುದಾಗಿ ಭರವಸೆ ನೀಡಿದರು. ಬಳಿಕ ನ್ಯಾಯಪೀಠ, ಪ್ರಕರಣ ಹಿಂಪಡೆಯುವ ಕುರಿತು ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ಅವರು ಚರ್ಚಿಸಿ ನ್ಯಾಯಾಲಯಕ್ಕೆ ತೀರ್ಮಾನ ತಿಳಿಸಬೇಕು. ಒಂದೊಮ್ಮೆ ಪ್ರಕರಣವನ್ನು ಮುಂದುವರಿಸುವ ತೀರ್ಮಾನ ಕೈಗೊಂಡರೆ, ನ್ಯಾಯಾಲಯ ಮೆರಿಟ್ (ವಿಚಾರಣಾ ಅರ್ಹತೆ) ಆಧಾರದಲ್ಲಿ ಅರ್ಜಿಗಳ ವಿಚಾರಣೆ ಮುಂದುವರಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು.