ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೈಗಾರಿಕೀಕರಣದ ಪರ್ವ ದೊಡ್ಡ ಮಟ್ಟದಲ್ಲಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು 7,856.37 ಎಕರೆ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ 2,278.10 ಎಕರೆಯನ್ನು ಕರ್ನಾಟಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆಯಲಾಗಿದ್ದು ಈ ಭೂ ಮಾಲೀಕರಿಗೆ ಪರಿಹಾರ ವಿತರಣೆ ಸಹ ಪ್ರಗತಿಯಲ್ಲಿದೆ. ಹೀಗೆ ಅಂತಿಮ ಅಧಿಸೂಚನೆ ಮತ್ತು ಪ್ರಾಥಮಿಕ ಅಧಿಸೂಚನೆ ಸೇರಿ ಜಿಲ್ಲೆಯಲ್ಲಿ 10,134 ಎಕರೆಯು ಕೈಗಾರಿಕೀಕರಣದ ಹಂತದಲ್ಲಿ ಇವೆ. ಪ್ರಾಥಮಿಕ ಅಧಿಸೂಚನೆಯ ಹಂತದಲ್ಲಿರುವ ಈ ಯೋಜನೆಗಳು ಯಾವುದೇ ಅಡೆತಡೆಗಳು ಇಲ್ಲದೆ ಜಾರಿಯಾದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗಳು ಆಗಲಿವೆ. ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎನ್ನುವ ಆಶಾವಾದ ಗರಿಗೆದರಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಚಿಕ್ಕಬಳ್ಳಾಪುರವು ಕೈಗಾರಿಕೀಕರಣದ ವಿಚಾರದಲ್ಲಿ ಪ್ರಮುಖ ಪ್ರದೇಶವಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುವರು. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ದಕ್ಷಿಣ (ರಾಮನಗರ) ಮತ್ತು ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೀಕರಣವು ವೇಗವಾಗಿ ಬೆಳೆಯುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಇಲ್ಲಿಯವರೆಗೆ ಕೈಗಾರಿಕೀಕರಣ ಬೆಳವಣಿಗೆಗಳು ದೊಡ್ಡ ಮಟ್ಟದಲ್ಲಿ ಆಗಿರಲಿಲ್ಲ. ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆಯಲ್ಲಿ ಮಾತ್ರ ಕೈಗಾರಿಕಾ ಪ್ರದೇಶವಿದೆ. ಕುಡುಮಲಕುಂಟೆ ಹೊರತುಪಡಿಸಿದರೆ ಜಿಲ್ಲೆಯ ಯಾವ ಭಾಗದಲ್ಲಿಯೂ ಕೈಗಾರಿಕೆಗಳಿಗೆ ವೇಗ ದೊರೆತಿರಲಿಲ್ಲ.
ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ಶಾಸಕರಾಗಿದ್ದ ವೇಳೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಶಂಕುಸ್ಥಾಪನೆ ನಡೆದಿತ್ತು. ಆ ನಂತರದ ದಿನಗಳಲ್ಲಿ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಹಿನ್ನಡೆ ಆಯಿತು. ಈಗ ಮತ್ತೆ ಸ್ವಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ದೊಡ್ಡ ಗುರಿಯನ್ನು ಸಚಿವರು ಹೊಂದಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆ ಹೋಬಳಿಯ ಸಂಜೀವಪುರ, ತೋಟ್ಲಗಾನಹಳ್ಳಿ, ಅರಿಕೆರೆ, ಬಸವಾಪಟ್ಟಣ, ಹೊಸಪೇಟೆ, ಚೊಕ್ಕೊಂಡನಹಳ್ಳಿ, ಯದ್ದಲತಿಪ್ಪೇನಹಳ್ಳಿ, ಕುಲುಮೆ ಹೊಸೂರು, ನಡಪಿನಾಯಕನಹಳ್ಳಿ, ತಾದೂರು, ಯಣ್ಣಂಗೂರು, ದೇವಗಾನಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ ಬಳಿ 2,823 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆ ಕಾರ್ಯಗತವಾದರೆ ಶಿಡ್ಲಘಟ್ಟ ತಾಲ್ಲೂಕಿಗೆ ಬೃಹತ್ ಪ್ರಮಾಣದಲ್ಲಿ ಜಾರಿಯಾದ ಕೈಗಾರಿಕಾ ಯೋಜನೆ ಇದಾಗುತ್ತದೆ. ಜಂಗಮಕೋಟೆ ಹೋಬಳಿಯ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಮೀಪವಾಗುತ್ತದೆ. ಈ ಹೋಬಳಿಯ ಅಮರಾವತಿ ಬಳಿಯೇ ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳು ಕೃಷಿಯೇ ಪ್ರಧಾನವಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ವರದಿಯಾಗಿದೆ.