image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರ್.ವಿ.ರಸ್ತೆ ನಮ್ಮ ಮೆಟ್ರೋ ನಿಲ್ದಾಣದ ಬಳಿಕ ಭಾರೀ ಹೈಡ್ರಾಮ : ಸಂಸದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

ಆರ್.ವಿ.ರಸ್ತೆ ನಮ್ಮ ಮೆಟ್ರೋ ನಿಲ್ದಾಣದ ಬಳಿಕ ಭಾರೀ ಹೈಡ್ರಾಮ : ಸಂಸದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

ಬೆಂಗಳೂರು : ನಗರದ ಆರ್.ವಿ.ರಸ್ತೆ ನಮ್ಮ ಮೆಟ್ರೋ ನಿಲ್ದಾಣದ ಬಳಿಕ ಭಾರೀ ಹೈಡ್ರಾಮ ನಡೆದಿದೆ. ಮೆಟ್ರೋ ರೈಲು ಏರಲು ಹೊರಟಿದ್ದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮುಂತಾದವರು ಪ್ರತಿಭಟನೆ ನಡೆಸುತ್ತಿದ್ದರು. ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋ ಅಂಟಿಸಿಕೊಂಡು ಮೆಟ್ರೋ ಏರಲು ಹೊರಟಿದ್ದರು. ಆಗ ಪೊಲೀಸರು ಅವರನ್ನು ತಡೆದರು. ಆಗ ತೇಜಸ್ವಿ ಸೂರ್ಯ ಮತ್ತು ಪೊಲೀಸರ ನಡುವೆ ವಾಗ್ವದ ನಡೆಯಿತು. ಶನಿವಾರವೂ ಸಂಸದ ತೇಜಸ್ವಿ ಸೂರ್ಯ ನಮ್ಮ ಮೆಟ್ರೋ ದರ ಏರಿಕೆ ಖಂಡಿಸಿ ನಮ್ಮ ಮೆಟ್ರೋದಲ್ಲಿ #RollBackFareHike ಎಂಬ ಟೀ ಶರ್ಟ್ ಧರಿಸಿ ಪ್ರಯಾಣ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. MR CM CUT THE DRAMA ಎಂಬ ಬರಹದ ಟೀ ಶರ್ಟ್ ಮೂಲಕ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಎಂಆರ್‌ಸಿಎಲ್ ಫೆಬ್ರವರಿ 5ರಂದು ಫೆ.9ರ ಸೋಮವಾರದಿಂದ ನಮ್ಮ ಮೆಟ್ರೋ ದರ ಶೇ 5ರಷ್ಟು ಏರಿಕೆಯಾಗಲಿದೆ ಎಂದು ಹೇಳಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಅಂತಿಮವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಸೂಚನೆ ಮೇರೆಗೆ ದರ ಏರಿಕೆ ಪ್ರಸ್ತಾವನೆಗೆ ಬಿಎಂಆರ್‌ಸಿಎಲ್ ತಾತ್ಕಾಲಿಕ ತಡೆ ನೀಡಿತ್ತು. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಿಎಂಆರ್‌ಸಿಎಲ್, 'ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್ ತಿಳಿಸುವುದೇನೆಂದರೆ, ದಿನಾಂಕ 5ನೇ ಫೆಬ್ರವರಿ 2026ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ದಿನಾಂಕ 9ನೇ ಫೆಬ್ರವರಿ 2026ರಿಂದ ವಾರ್ಷಿಕಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ' ಎಂದು ಹೇಳಿತ್ತು. 'ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಗಸ್ತ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ' ಎಂದು ತಿಳಿಸಿತ್ತು.

Category
ಕರಾವಳಿ ತರಂಗಿಣಿ