image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಚಿಂತನೆ ಇದೆ : ಎಂ.ಬಿ. ಪಾಟೀಲ‌

ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಚಿಂತನೆ ಇದೆ : ಎಂ.ಬಿ. ಪಾಟೀಲ‌

ಬೆಂಗಳೂರು : 'ಸರ್ಕಾರಿ ನೌಕರರಿಗೆ ಎಲ್ಲ ವಸ್ತುಗಳೂ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಚಿಂತನೆ ಇದೆ' ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ‌ ತಿಳಿಸಿದರು. ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್)‌ ಸಂಸ್ಥೆಯು ಸುಗಮ ಮತ್ತು ಪಾರದರ್ಶಕ ಚಿಟ್‌ ಫಂಡ್‌ ವ್ಯವಹಾರದ ಅನುಕೂಲಕ್ಕೆ ಅಭಿವೃದ್ಧಿಪಡಿಸಿರುವ ತಂತ್ರಾಂಶ ಮತ್ತು ಮೊಬೈಲ್‌ ಆಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಕುರಿತಂತೆ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಇದರಿಂದ 20 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ' ಎಂದೂ ಪಾಟೀಲ ಹೇಳಿದರು. 'ಸುಗಮ ಮತ್ತು ಪಾರದರ್ಶಕ ವ್ಯವಹಾರಕ್ಕೆಂದೇ ಎಂಎಸ್‌ಐಎಲ್ ಚಿಟ್ಸ್ ತಂತ್ರಾಂಶ ಮತ್ತು ಮೊಬೈಲ್ ಆಯಪ್ ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯು ಈಗ 27 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ಇದನ್ನು ವಿಸ್ತರಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ಭಾಗ ಮತ್ತು ಮಹಿಳೆಯರ ಉಳಿತಾಯದ ಮೇಲೆ ನಮ್ಮ ಗಮನವಿದೆ. ನಮ್ಮಲ್ಲಿ ಬ್ಯಾಂಕುಗಳಲ್ಲಿ ಕೊಡುವುದಕ್ಕಿಂತ ಹೆಚ್ಚಿನ ಲಾಭ ಇದರ ಮೂಲಕ ಸಿಗಲಿದೆ' ಎಂದರು.

'ಸುಗಮ ಚಿಟ್‌ ವ್ಯವಹಾರಕ್ಕಾಗಿ ಸಂಸ್ಥೆಯು ಏಜೆಂಟರನ್ನು ನೇಮಿಸಲಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇಲ್ಲಿ ವಿಶೇಷ ಉಳಿತಾಯ ಸ್ಕೀಮುಗಳನ್ನು ತರಲಾಗುವುದು. ಇದರಲ್ಲಿ ಈ ಸಂಘಗಳ ಸಖಿಯರೇ ಏಜೆಂಟರಾಗಿ ನೇಮಕಗೊಳ್ಳಲಿದ್ದಾರೆ. ಇವರಲ್ಲದೆ, ಹೋಟೆಲ್, ಕಿರಾಣಿ ಅಂಗಡಿಗಳನ್ನೂ ಏಜೆಂಟ್ ರೀತಿ ಕಾರ್ಯನಿರ್ವಹಿಸಲು ವ್ಯವಸ್ಥೆ ರೂಪಿಸಲಾಗುವುದು. ಸರ್ಕಾರಿ ನೌಕರರ ಹೂಡಿಕೆಗೆ ಆದ್ಯತೆ ನೀಡಲಾಗುವುದು. ಒಟ್ಟಿನಲ್ಲಿ ಮನೆ ಮನೆಗೂ ಎಂಎಸ್‌ಐಎಲ್ ಚಿಟ್ ತಲುಪಲಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯಲಿದೆ' ಎಂದರು. 'ಚಿಟ್‌ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಕಂತನ್ನು ಆಯಪ್‌ ಮೂಲಕ ಯುಪಿಐ ಪಾವತಿ, ವೆಬ್‌ಸೈಟ್‌ ಮೂಲಕ ಪಾವತಿ, ಆನ್‌ಲೈನ್‌ ಮೂಲಕವೇ ಪಾವತಿಸಬಹುದು. ಅಷ್ಟೇ ಅಲ್ಲದೆ ಅನ್ ಲೈನ್ ಮೂಲಕ ಬಿಡ್‌ನಲ್ಲಿಯೂ ಭಾಗವಹಿಸುವ ಪ್ರಯೋಜನಗಳಿವೆ' ಎಂದೂ ತಿಳಿಸಿದರು. ಎಂಎಸ್‌ಐಎಲ್‌ ಅಧ್ಯಕ್ಷ ಪುಟ್ಟರಂಗ ಶೆಟ್ಟಿ ಮಾತನಾಡಿ, 'ಸಂಸ್ಥೆಯು 2024-25ರಲ್ಲಿ ₹ 3,882 ಕೋಟಿ ವಹಿವಾಟು ನಡೆಸಿ, ₹ 122 ಕೋಟಿಗಿಂತಲೂ ಹೆಚ್ಚು ಲಾಭ ದಾಖಲಿಸಿದೆ. ಸಂಸ್ಥೆಯ ಬಲವರ್ಧನೆಗೆ ವಿಷನ್-2030 ಎನ್ನುವ ನೀಲನಕ್ಷೆ ಸಿದ್ಧಪಡಿಸಿದ್ದು, ಸಿಎಸ್‌ಆರ್‌ ಉಪಕ್ರಮದಡಿ ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸಗಳಿಗೆ ಹಣ ಕೊಡಲಾಗುತ್ತಿದೆ' ಎಂದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಇದ್ದರು.

Category
ಕರಾವಳಿ ತರಂಗಿಣಿ