ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಬೃಹತ್ ಡ್ರಗ್ ತಯಾರಿಕಾ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ರಹಸ್ಯ ಪ್ರಯೋಗಾಲಯವನ್ನು ಪತ್ತೆಹಚ್ಚಿ, 10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿ, ರಾಜಸ್ಥಾನ ಮೂಲದ ನಾಲ್ವರನ್ನು ಬಂಧಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಮಾದಕವಸ್ತುಗಳ ಅಕ್ರಮ ಜಾಲದ ಕೇಂದ್ರವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಉದ್ಭವಿಸಿದೆ. ಮೈಸೂರಿನಲ್ಲಿ ಡ್ರಗ್ ತಯಾರಿಸಿ ಅಂತರರಾಜ್ಯಗಳಿಗೆ ಸರಬರಾಜು ಮಾಡಲು ರೂಪಿಸಲಾಗಿದ್ದ ದೊಡ್ಡ ಮಟ್ಟದ ಯೋಜನೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೇದಿಸಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲೇ ರಹಸ್ಯ ಪ್ರಯೋಗಾಲಯ ಸ್ಥಾಪಿಸಿ ಮಾದಕವಸ್ತು ಉತ್ಪಾದನೆಗೆ ಸಜ್ಜಾಗಿದ್ದ ಅಂತರರಾಜ್ಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಎನ್‌ಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಇದು ಮೈಸೂರಿನಲ್ಲಿ ಪತ್ತೆಯಾಗಿರುವ ಎರಡನೇ ಡ್ರಗ್ ತಯಾರಿಕಾ ಘಟಕ ಆಗಿದ್ದು, ಈ ಬಾರಿ ಘಟಕವನ್ನು ಪತ್ತೆ ಹಚ್ಚಿದವರು ಹೊರರಾಜ್ಯದ ಪೊಲೀಸ್ ಅಧಿಕಾರಿಗಳಾಗಿರುವುದು ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಮೈಸೂರಿನಲ್ಲಿ ಡ್ರಗ್ ತಯಾರಿಕೆ ನಡೆಯುತ್ತಿದ್ದುದು ಗೊತ್ತಾಗಿದ್ದರೂ, ತಮ್ಮ ವ್ಯಾಪ್ತಿಯಲ್ಲೇ ಬೆಳೆಯುತ್ತಿದ್ದ ಅಕ್ರಮ ಜಾಲವನ್ನು ಪತ್ತೆಹಚ್ಚಲು ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರವು ನಿಧಾನವಾಗಿ ಮಾದಕವಸ್ತುಗಳ ಹಬ್ ಆಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚುತ್ತಿದೆ.ಎನ್‌ಸಿಬಿ ನಡೆಸಿದ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ 25.6 ಲಕ್ಷ ರೂಪಾಯಿ ನಗದು, ಒಂದು ಕರ್ನಾಟಕ ನೋಂದಣಿ ಹೊಂದಿರುವ ಕಾರು ಹಾಗೂ 500 ಕಿಲೋಗ್ರಾಂಕ್ಕೂ ಅಧಿಕ ಪ್ರಮಾಣದ ವಿವಿಧ ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ರಾಸಾಯನಿಕಗಳನ್ನು ಮಾದಕವಸ್ತು ತಯಾರಿಕೆಗೆ ಬಳಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.