ಬೆಂಗಳೂರು : ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಸರ್ಕಾರ ಸಾಮಾನ್ಯವಾಗಿ ದೂರುತ್ತಿತ್ತು. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026-27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಾಶೆಯೇನೂ ಆಗಿಲ್ಲ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ ಗೋಡಂಬಿ ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ. ಶ್ರೀಗಂಧ, ತೆಂಗು ಬೆಳೆ, ಕೋಕೋ ಬೆಳೆಗೆ ವಿಶೇಷ ಯೋಜನೆ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಿಗೆ ಉಪಯೋಗ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹೈದರಾಬಾದ್-ಬೆಂಗಳೂರು, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. ಈಗಾಗಲೇ ರಾಜ್ಯದ ಹಲವು ವೇಗದ ರೈಲುಗಳು ಕಾರ್ಯಾಚರಿಸುತ್ತಿದ್ದು, ವಂದೇ ಭಾರತ್ ರೈಲುಗಳು ಕೂಡ ಸೇರ್ಪಡೆಯಾಗಿದೆ. ಈಗ ಹೈ ಸ್ಪೀಡ್ ರೈಲುಗಳು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.