ಬೆಂಗಳೂರು : ಜನವರಿ ತಿಂಗಳ ಅನ್ನಭಾಗ್ಯದ ಅಕ್ಕಿ ನೀಡದ, ಅಕ್ಕಿಯ ಬದಲು ಹಣವನ್ನೂ ನೀಡದ ರಾಜ್ಯ ಸರ್ಕಾರವನ್ನು ಶಾಸಕ ಮಹೇಶ್ ಟೆಂಗಿನಕಾಯಿ ಜರಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ, ನಿನ್ನೆ ವಿಧಾನಸಭೆಯಲ್ಲಿ ಪ್ರಶ್ನೋತ್ತರದಲ್ಲಿ 2025ರ ಜನವರಿ ತಿಂಗಳ ಪಡಿತರ ಹಣ ಫಲಾನುಭವಿಗಳಿಗೆ ಹಾಕದಿರುವ ಬಗ್ಗೆ ಪ್ರಶ್ನೆ ಕೇಳಿದ್ದೆ. ಸದನದಲ್ಲಿ ಉತ್ತರದ ವೇಳೆ ಸಚಿವ ಕೆ.ಹೆಚ್. ಮುನಿಯಪ್ಪ ಕೇಂದ್ರ ಸರ್ಕಾರದ ಮೇಲೆ ಹಾಕುವ ಪ್ರಯತ್ನ ಮಾಡಿದರು. ನಾನು ಇಂದು ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ದೂರವಾಣಿಯಲ್ಲಿ ಮಾತಾಡಿದ್ದೇನೆ. ಬೆಳಗ್ಗೆ ಹಣ ಜಮಾ ಮಾಡಿದರೆ ಸಂಜೆ ಅಕ್ಕಿ ಹಾಕುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.
ಹಾಗಾದರೆ ಆರ್ಥಿಕ ಇಲಾಖೆಯಲ್ಲಿ ಹಣ ಇಲ್ವಾ? ಜನವರಿ 2025ರ ಅಕ್ಕಿಯನ್ನೂ ಕೊಟ್ಟಿಲ್ಲ, ಹಣವನ್ನೂ ಹಾಕಿಲ್ಲ. ಫಲಾನುಭವಿಗಳಿಗೆ ಹಣವನ್ನಾದರೂ ಹಾಕಿ ಅಥವಾ ಅಕ್ಕಿಯನ್ನಾದರೂ ಕೊಡಿ. 9 ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದೇನೆ ಎಲ್ಲಾ ಜಿಲ್ಲೆಗಳಿಂದಲೂ ಒಂದೇ ಉತ್ತರ ಬಂದಿದೆ. ಜನವರಿಯಲ್ಲಿ ಸಭೆ ಆಗಿದೆ, ಫೆಬ್ರವರಿಯಲ್ಲಿ ಹಾಕಿದ್ದೇವೆ ಎಂಬ ಒಂದೇ ಉತ್ತರ ಕೊಟ್ಟಿದ್ದಾರೆ. ಇದು ಭಿಕ್ಷೆ ಹಾಕೋದಲ್ಲ. 657 ಕೋಟಿ ರೂ. ಹಣವನ್ನು ಆದರೂ ಕೊಡಿ ಅಥವಾ ಅಕ್ಕಿಯನ್ನಾದರೂ ಕೊಡಿ. ಮೋಸ ಮಾಡುವ ಪ್ರಯತ್ನ ರಾಜ್ಯ ಸರ್ಕಾರ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಇಲ್ಲ ಎಂದು ಹೇಳಿದ್ದಾರೆ.