image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಿಂದ ಕುಶಾಲನಗರಕ್ಕೆ ಮೈಸೂರಿನ ಸಂಪರ್ಕಕ್ಕೆ ಬಾರದೆಯೇ ಪ್ರಯಾಣ

ಬೆಂಗಳೂರಿನಿಂದ ಕುಶಾಲನಗರಕ್ಕೆ ಮೈಸೂರಿನ ಸಂಪರ್ಕಕ್ಕೆ ಬಾರದೆಯೇ ಪ್ರಯಾಣ

ಮೈಸೂರು : ಮೈಸೂರು-ಕುಶಾಲನಗರ ಹೆದ್ದಾರಿಯ 92 ಕಿ.ಮೀ. ಪೈಕಿ 84 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸತಾಗಿ ನಿರ್ಮಿಸುತ್ತಿದೆ. ಬೆಂಗಳೂರಿನಿಂದ ಕುಶಾಲನಗರಕ್ಕೆ ಹೋಗುವವರು ಮೈಸೂರಿನ ಸಂಪರ್ಕಕ್ಕೆ ಬಾರದೆಯೇ ಪ್ರಯಾಣ ಮುಂದುವರಿಸಬಹುದು. ಬೆಂಗಳೂರು-ಮೈಸೂರು ಹೊಸ ಹೆದ್ದಾರಿಗೆ ಹೊಂದಿಕೊಂಡಂತೆಯೇ ಶ್ರೀರಂಗಪಟ್ಟಣ ಬೊಮ್ಮೂರು ಅಗ್ರಹಾರ ಗ್ರಾಮದ ಬಳಿ ವರ್ತುಲ ಮಾದರಿಯ 'ಟ್ರಂಪೆಡ್' ರಸ್ತೆ ನಿರ್ಮಾಣವಾಗಲಿದ್ದು, ಇದು ಕುಶಾಲನಗರ ಹೆದ್ದಾರಿಗೆ 'ಸೇತುವೆ' ಆಗಲಿದೆ. ಬೆಂಗಳೂರು ಕಡೆಯಿಂದ ಹೊಸ ಹೆದ್ದಾರಿಯಲ್ಲಿ ಬಂದಷ್ಟೇ ವೇಗವಾಗಿ ವಾಹನಗಳು ಕುಶಾಲನಗರ ಕಡೆಗೆ ತಿರುಗಿ, ಯಾವ ಅಡೆತಡೆಯೂ ಇಲ್ಲದೆಯೇ ಪ್ರಯಾಣ ಮುಂದುವರಿಸಬಹುದು. ಪ್ರಯಾಣಿಕರ ಸಮಯವೂ ಉಳಿಯಲಿದೆ. 'ಪ್ಯಾಕೇಜ್‌-5' ಕಾಮಗಾರಿಯ ಕೊನೆಯ ಹಂತದಲ್ಲಿ ಈ ಸಂಪರ್ಕ ಸೇತು ಮಾರ್ಗ ನಿರ್ಮಾಣವಾಗಲಿದೆ.

ಶ್ರೀರಂಗಪಟ್ಟಣದ ಹೊರವಲಯದಿಂದ ಶುರುವಾಗಿ, ರಂಗನತಿಟ್ಟು-ಬೆಳಗೊಳ ಮೂಲಕ ಸಾಗುವ ಹೆದ್ದಾರಿಯು ಇಲವಾಲದ ತರುವಾಯವಷ್ಟೇ ಮೈಸೂರಿನ ಸಂಪರ್ಕಕ್ಕೆ ಬರಲಿದೆ. ನಂತರವೂ ಯಲಚಹಳ್ಳಿ-ಬಿಳಿಕೆರೆ ಮಾರ್ಗದಲ್ಲಿ ಮುಂದುವರಿಯಲಿದ್ದು, ಹಳೇ ರಸ್ತೆಯ ಸಂಪರ್ಕಕ್ಕೆ ಸಿಗುವುದಿಲ್ಲ. ಬಹುತೇಕ ಹಳ್ಳಿಗಳ ನಡುವೆಯೇ ಹೊಸ ಹೆದ್ದಾರಿ ಸಾಗಿದ್ದು, ಅನೇಕ ಊರುಗಳು ಹೆದ್ದಾರಿಯ ಸಂಪರ್ಕ ಪಡೆಯುವುದು ವಿಶೇಷ.

ಕುಶಾಲನಗರ ವ್ಯಾಪ್ತಿಯಲ್ಲಿ 11.6 ಕಿ.ಮೀ, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ 19 ಕಿ.ಮೀ. ಹಾಗೂ ಹುಣಸೂರು-ಮೈಸೂರು ವ್ಯಾಪ್ತಿಯಲ್ಲಿ 25 ಕಿ.ಮೀ ಉದ್ದದ ಹೊಸ ಬೈಪಾಸ್‌ ರಸ್ತೆಗಳು ನಿರ್ಮಾಣವಾಗುತ್ತಿವೆ. ಈ ಪಟ್ಟಣಗಳ ಒಳಗೆ ಪ್ರವೇಶಿಸದೆಯೇ ಪ್ರಯಾಣಿಕರು ಹೊಸ ಹೆದ್ದಾರಿಯಲ್ಲಿ ಕುಶಾಲನಗರದ ಆಚೆಗೆ ತೆರಳಬಹುದು. 'ಬೆಂಗಳೂರು-ಮಡಿಕೇರಿ ನಡುವಿನ ಪ್ರಯಾಣಕ್ಕೆ ಈ ಮೊದಲು 6-7 ಗಂಟೆ ಬೇಕಿತ್ತು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಪ್ರಯಾಣದ ಅವಧಿ ನಾಲ್ಕು ಗಂಟೆಗೆ ಇಳಿಯಲಿದೆ' ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು. 'ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ಸಮಸ್ಯೆ. ಹಳೇ ರಸ್ತೆಯ ವಿಸ್ತರಣೆ ಬದಲು ಕಡಿಮೆ ಖರ್ಚಿನಲ್ಲಿ ಹೊಸ ಮಾರ್ಗವನ್ನೇ ನಿರ್ಮಿಸಬಹುದು. ಕಾಮಗಾರಿಗಳೂ ಸಲೀಸಾಗಿ ಸಾಗುತ್ತವೆ' ಎನ್ನುತ್ತಾರೆ ಅವರು.

Category
ಕರಾವಳಿ ತರಂಗಿಣಿ