ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ರಾಜಕೀಯ ಸಂಘರ್ಷ ಸ್ಫೋಟಗೊಂಡಿದೆ. ಭಾಷಣದ ವಿಚಾರವಾಗಿ ಸಚಿವ ಎಚ್.ಕೆ. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರ ನಡುವೆ ನಡೆದ ವಾಗ್ವಾದ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಗಣರಾಜ್ಯೋತ್ಸವದ ಭಾಷಣ ಮಾಡುತ್ತಿದ್ದಾಗ, "ರಾಜ್ಯಪಾಲರಿಂದ ಹಕ್ಕು ಕಸಿತವಾಗಿದೆ ಹಾಗೂ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾನೂನನ್ನು ನಿರಸನಗೊಳಿಸಿದೆ" ಎಂದು ಉಲ್ಲೇಖಿಸಿದರು. ಸಚಿವರ ಈ ಹೇಳಿಕೆಗೆ ವೇದಿಕೆಯಲ್ಲಿದ್ದ ಬಿಜೆಪಿ ಎಂಎಲ್‌ಸಿ ಎಸ್.ವಿ. ಸಂಕನೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನೇರವಾಗಿ ಡಯಾಸ್ ಬಳಿ ತೆರಳಿ ಸಚಿವರ ಮಾತನ್ನು ತಡೆದ ಸಂಕನೂರು, ಇದು ರಾಜಕೀಯ ವೇದಿಕೆಯಲ್ಲ ಎಂದು ಕಿಡಿಕಾರಿದರು. ಆದರೆ, ಸಚಿವರು ತಮ್ಮ ಭಾಷಣ ಮುಂದುವರಿಸಿದ್ದರಿಂದ ಕುಪಿತಗೊಂಡ ಸಂಕನೂರು ಕಾರ್ಯಕ್ರಮದಿಂದ ಅರ್ಧಕ್ಕೆ ಹೊರನಡೆದರು.
ಲಕ್ಕುಂಡಿಯಲ್ಲಿ ಮನೆ ಅಡಿಪಾಯ ಹಾಕುವಾಗ ಸಿಕ್ಕ 466 ಗ್ರಾಂ ಚಿನ್ನಾಭರಣವನ್ನು ಸರ್ಕಾರದ ವಶಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದ ರಿತ್ತಿ ಕುಟುಂಬಕ್ಕೆ ಸಚಿವರು ಸನ್ಮಾನಿಸಿ, ಕೊಡುಗೆಗಳನ್ನು ಘೋಷಿಸಿದರು. ಬಡ ಕುಟುಂಬಕ್ಕೆ 30/40 ಅಳತೆಯ ನಿವೇಶನ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಮಂಜೂರು ಅಲ್ಲದೇ ಬಾಲಕ ಪ್ರಜ್ವಲ್ ತಾಯಿ ಕಸ್ತೂರವ್ವ ಅವರಿಗೆ ವಸತಿ ನಿಲಯದ ಸಹಾಯಕಿ ಹುದ್ದೆಯ ನೇಮಕಾತಿ ಪತ್ರ ವಿತರಿಸಲಾಯಿತು. ಬಾಲಕ ಪ್ರಜ್ವಲ್ ರಿತ್ತಿ ಲಕ್ಕುಂಡಿಯ ಸಂಸ್ಕೃತಿಗೆ ಕೀರ್ತಿ ತಂದಿದ್ದಾನೆ. ಆತನ ಕುಟುಂಬದ ತೋರಿದ ಸಾಮಾಜಿಕ, ನೈತಿಕ, ಸಾಂಸ್ಕೃತಿಕ ನಿಲುವುಗಳು ಪ್ರಶಂಸನಾರ್ಹ" ಎಂದು ಸಚಿವರು ಶ್ಲಾಘಿಸಿದರು.