ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖಾ ಮಟ್ಟದಲ್ಲಿ ಸಭೆ ನಡೆಸಿ, ಬದಲಾವಣೆಯ ಸಾಧಕ-ಬಾಧಕಗಳ ಕುರಿತು ವಿವರವಾದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಪೈಕಿ ಗಣಿತ ವಿಷಯದಲ್ಲೇ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ, ಈ ವಿಷಯಕ್ಕೆ ಮಾತ್ರ ವಿಭಿನ್ನ ಪರೀಕ್ಷಾ ಪದ್ಧತಿ ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಗಣಿತ ಪರೀಕ್ಷೆಗೆ ಎರಡು ವಿಭಿನ್ನ ಪ್ರಶ್ನೆಪತ್ರಿಕೆಗಳ ಮಾದರಿ ರೂಪಿಸುವ ಸಾಧ್ಯತೆಗಳ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಸಲು ಸೂಚಿಸಲಾಗಿದೆ. ಗಣಿತ ಪರೀಕ್ಷೆಯನ್ನು ಸರಳ ಹಾಗೂ ಸಾಮಾನ್ಯ ಪ್ರಶ್ನೆಪತ್ರಿಕೆಯ ಮೂಲಕ ನಡೆಸುವ ಸಾಧ್ಯತೆ ಕುರಿತು ಇಲಾಖೆ ಗಂಭೀರವಾಗಿ ಆಲೋಚಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಇರುವ ಅತಿಯಾದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಗಣಿತ ವಿಷಯದ ಬಗ್ಗೆ ಇರುವ ಭಯ ನಿವಾರಣೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗಣಿತ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂಬ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವುದು ಈ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಈ ಮನವಿಯ ಹಿನ್ನೆಲೆಯಲ್ಲಿ ಸಚಿವರು ಇಲಾಖಾ ಹಂತದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮಗಳ ಪರೀಕ್ಷಾ ಪದ್ಧತಿಗಳ ನಡುವೆ ಸಮತೋಲನ ತರಬೇಕೆಂಬ ಉದ್ದೇಶವೂ ಸರ್ಕಾರದ ಮುಂದಿದೆ. ರಾಷ್ಟ್ರಮಟ್ಟದ ಶಿಕ್ಷಣ ಮಾದರಿಯೊಂದಿಗೆ ರಾಜ್ಯದ ಪರೀಕ್ಷಾ ವ್ಯವಸ್ಥೆಯನ್ನು ಹೊಂದಾಣಿಕೆ ಮಾಡುವ ಕುರಿತೂ ಚರ್ಚೆ ನಡೆಯುತ್ತಿದೆ. ಎಲ್ಲಾ ಹಂತದ ಸಭೆಗಳು ಹಾಗೂ ವರದಿ ಸಲ್ಲಿಕೆಯ ನಂತರ, ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಗಣಿತ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿವೆ.