image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಂಗಡದಲ್ಲಿಯೂ ಒಳಮೀಸಲಾತಿ ಶೀಘ್ರ ಜಾರಿಗೊಳಿಸಬೇಕು : ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಹೋರಾಟ ಸಮಿತಿ ಆಗ್ರಹ

ಪಂಗಡದಲ್ಲಿಯೂ ಒಳಮೀಸಲಾತಿ ಶೀಘ್ರ ಜಾರಿಗೊಳಿಸಬೇಕು : ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಂಗಳೂರು: ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ 2024ರ ಆ. 1ರಂದು ಸುಪ್ರೀಂ ಕೋರ್ಟ್‌ನ 7 ಸದಸ್ಯರ ಸಂವಿಧಾನ ಪೀಠ ನೀಡಿದ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ತೀರ್ಪು ಪರಿಶಿಷ್ಟ ಜಾತಿಗಳಿಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಆದ್ದರಿಂದ ಪರಿಶಿಷ್ಟ ಪಂಗಡಗಳಲ್ಲಿಯೂ ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.

ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ‘ಎಸ್‌.ಟಿ. ಮೀಸಲಾತಿ ಸಾಧ್ಯತೆ’ ಕುರಿತಾಗಿ ಬಾಲಂ ಭಟ್ ಸಭಾಂಗಣದಲ್ಲಿ ಬುಡಕಟ್ಟು ಸಮುದಾಯಗಳ ನಾಯಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಪಂಗಡದಲ್ಲಿ 50 ಜಾತಿಗಳಿದ್ದು, ಒಟ್ಟು 42.48 ಲಕ್ಷ ಜನಸಂಖ್ಯೆಯಿದೆ. ಇದರಲ್ಲಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ 32.96 ಲಕ್ಷವಾಗಿದ್ದು, ಉಳಿದ 49 ಜಾತಿಗಳ ಒಟ್ಟು ಜನಸಂಖ್ಯೆ ಕೇವಲ 9.52 ಲಕ್ಷ ಮಾತ್ರವಾಗಿದೆ. ಪರಿಶಿಷ್ಟ ಪಂಗಡದಲ್ಲಿ ಪ್ರಬಲವಾಗಿರುವ ವಾಲ್ಮೀಕಿ ಸಮುದಾಯವೇ ಉಳಿದ ಜಾತಿಗಳನ್ನು ಪೊರೆಯಬೇಕಾಗಿದೆ. ಒಳಮೀಸಲಾತಿ ಜಾರಿಯಾದರೆ ಅತೀ ಸಣ್ಣ ಹಾಗೂ ಅತೀ ಹಿಂದುಳಿದ ಜಾತಿಗಳಿಗೂ ಅವರ ನ್ಯಾಯಸಮ್ಮತ ಪಾಲು ದೊರೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೇಶಕ್ಕೇ ಮಾದರಿಯಾಗುವಂತೆ ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಮೂರು ಪ್ರಮುಖ ಅಂಶಗಳಿಗೆ ವಿಶೇಷ ಗಮನ ನೀಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ನಿಖರ ದತ್ತಾಂಶಗಳ ಸಂಗ್ರಹ, ಹಿಂದುಳಿದಿರುವಿಕೆಯ ಸಮಗ್ರ ಅಧ್ಯಯನ ಹಾಗೂ ಸಮಾನರು–ಅಸಮಾನರು ಒಂದೇ ಗುಂಪಿನಲ್ಲಿ ಸೇರದಂತೆ ಎಚ್ಚರ ವಹಿಸುವುದು ಈ ಮೂರು ಅಂಶಗಳಾಗಿವೆ. ಈ ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಿ, ಒಳಮೀಸಲಾತಿ ವರ್ಗೀಕರಣದ ಸೂತ್ರಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ತಕ್ಷಣವೇ ಪ್ರತ್ಯೇಕ ಆಯೋಗವನ್ನು ರಚಿಸಬೇಕು. ನಮ್ಮ ಮನವಿಗಳನ್ನು ಈಗಾಗಲೇ ಸಂಬಂದ್ದಪಟ್ಟ ಕೆಲವು ಅಧಿಕಾರಿಗಳಿಗೆ ನೀಡಲಾಗಿದೆ.

ಹೋರಾಟದ ಮುಂದಿನ ಹಂತವಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ. ಕೆ. ಸುಂದರ ನಾಯ್ಕ್, ಲಾಮ್ಸ್ ಮಹಾಮಂಡಳದ ಅಧ್ಯಕ್ಷ ಕಾವೇರ, ಮಾಜಿ ಅಧ್ಯಕ್ಷ ಮುತ್ತಪ್ಪ, ಎಸ್‌ಟಿ ಸಮುದಾಯಗಳ ಪ್ರಮುಖರಾದ ಸುಂದರ ನಾಯ್ಕ್ ಮತ್ತು ಮುದ್ದಯ್ಯ ಹಾಗೂ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್‌ ಮುಗುಳಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ