ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಸಾರಾ ಮಹೇಶ್, ಪಕ್ಷ ಸಂಘಟನೆ ಮತ್ತು ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರದ ಬೇಡಿಕೆ, ಚಾಮುಂಡೇಶ್ವರಿ ಸ್ಪರ್ಧೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಜಿ.ಟಿ.ದೇವೇಗೌಡರನ್ನು ಮರಳಿ ಕರೆತರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಮಾಜಿ ಪ್ರಧಾನಿ, JDS ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪಕ್ಷದ ಒಳಚರ್ಚೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಇಂದಿನ ಸಭೆ ಮುಖ್ಯವಾಗಿ ಎರಡು ವಿಷಯಗಳ ಕುರಿತಾಗಿತ್ತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆ ಬಲಪಡಿಸುವ ಬಗ್ಗೆ ಮತ್ತು ಹಾಸನದಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಈ ಎರಡೂ ವಿಷಯಗಳ ಕುರಿತು ದೇವೇಗೌಡರ ಜೊತೆ ಸಮಗ್ರ ಚರ್ಚೆ ನಡೆಸಲಾಗಿದೆ" ಎಂದು ಸಾರಾ ಮಹೇಶ್ ತಿಳಿಸಿದರು.
ಚಾಮರಾಜ ಕ್ಷೇತ್ರವನ್ನು ಮೈತ್ರಿ ರಾಜಕಾರಣದ ಭಾಗವಾಗಿ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನೂ ಪಕ್ಷದ ವರಿಷ್ಠರ ಮುಂದೆ ಇಡಲಾಗಿದೆ ಎಂದು ಸಾರಾ ಮಹೇಶ್ ತಿಳಿಸಿದರು. ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವಂತೆ ಒತ್ತಾಯಿಸಲು ನಾವು ಮನವಿ ಮಾಡಿದ್ದೇವೆ ಎಂದು ಹೇಳಿರುವುದರಿಂದ ಮೈತ್ರಿ ಪಕ್ಷ ಬಿಜೆಪಿಯ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು. ಏಕೆಂದರೆ ಈಗಾಗಲೇ ಚಾಮರಾಜ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಬಿರುಸಿನ ಚಟುವಟಿಕೆ ಆರಂಭಿಸಿದ್ದು, ನಾನು ಆಕಾಂಕ್ಷಿ ಎಂದಿದ್ದಾರೆ. ಇದಕ್ಕೆ ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಕೆಂಡಾಮಂಡಲ ಆಗಿದ್ದರು. ಇಬ್ಬರ ಕಿತ್ತಾಟದ ನಡುವೆ ಈಗ ಜೆಡಿಎಸ್ ಕಣ್ಣಿಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ ಅಲ್ಲಿ ಕಾಂಗ್ರೆಸ್ ನ ಹರೀಶ್ ಗೌಡ ಕ್ಷೇತ್ರದ ಶಾಸಕರಾಗಿದ್ದಾರೆ.