ಬೆಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆಸಿದ ಇತ್ತೀಚಿನ ಭೇಟಿಯು ಕೇವಲ ಔಪಚಾರಿಕವಾಗಿದ್ದು, ಇದಕ್ಕೆ ಯಾವುದೇ ವಿಶೇಷ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದ್ದಾರೆ. ಪಕ್ಷದ ವರಿಷ್ಠರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸುವುದು ಸಾಮಾನ್ಯ ವಿಷಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ.ಶಿ, "ನಾನು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆ ಎಂಬುದು ನಿಜ. ಆದರೆ ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅದು ನಮ್ಮಿಬ್ಬರಿಗೆ ಸಂಬಂಧಿಸಿದ ವಿಷಯ," ಎಂದು ತಿಳಿಸಿದ್ದಾರೆ. ಇದೇ ವೇಳೆ, ಅಸ್ಸಾಂ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸಲು ಶುಕ್ರವಾರ ದೆಹಲಿಗೆ ತೆರಳುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಕಾವೇರಿ ವಿವಾದದ ಕುರಿತು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತಾವು ಹಂಚಿಕೊಂಡಿದ್ದ ಪೋಸ್ಟ್ ಬಗ್ಗೆಯೂ ಅವರು ವಿವರಣೆ ನೀಡಿದ್ದು, "ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗದು ಎಂದು ನಾನು ಬರೆದಿದ್ದೆ. ನನ್ನ ಪ್ರಾರ್ಥನೆಯ ಫಲವಾಗಿ ಕಾವೇರಿ ವಿವಾದಕ್ಕೆ ನ್ಯಾಯಾಲಯದಲ್ಲಿ ಹೊಸ ರೂಪ ಸಿಕ್ಕಿದೆ. ಮೇಕೆದಾಟು ಜಲಾಶಯದ ಬಗ್ಗೆ ಕೇಂದ್ರ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಸೂಚಿಸಿದೆ. ಇದೇ ಕಾರಣಕ್ಕೆ ನಾನು ಆ ರೀತಿ ಟ್ವೀಟ್ ಮಾಡಿದ್ದೆ," ಎಂದು ಅವರು ವಿವರಿಸಿದ್ದಾರೆ. ರಾಹುಲ್ ಗಾಂಧಿ ಭೇಟಿಯ ಬಳಿಕ ಅವರ ಬೆಂಬಲಿಗರಲ್ಲಿ ಹರ್ಷ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, "ಬೆಂಬಲಿಗರು ಏನು ಸಂಭ್ರಮಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುವುದು ಹೊಸ ವಿಷಯವೇನಲ್ಲ. ವರಿಷ್ಠರು ರಾಜ್ಯಕ್ಕೆ ಬಂದಾಗ ಅವರನ್ನು ಸ್ವಾಗತಿಸುವುದು ನನ್ನ ಕರ್ತವ್ಯ," ಎಂದು ಹೇಳಿದ್ದಾರೆ.