ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಸಿಲುಕಿದ್ದಾರೆ. ರಾಜ್ಯ ಸಂಸ್ಥೆಯೊಂದರ ಪದಾಧಿಕಾರಿಯಾಗಿರುವ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್/ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಸಿಐನ ಸ್ವಹಿತಾಸಕ್ತಿ ಸಂಘಷ್ಟ ನಿಯಮ 38(4)ರ ಅಡಿಯಲ್ಲಿ ಇದು ಉಲ್ಲಂಘನೆಯಾಗಿದೆ. ತಂಡದ ಅಭ್ಯಾಸದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿರುವುದು, ಪಂದ್ಯದ ವೇಳೆ ತಂಡದೊಂದಿಗೆ ಡಗೌಟ್‌ನಲ್ಲಿ ಕೂತಿರುವ ದೃಶ್ಯಗಳು ಡಬ್ಲ್ಯುಪಿಎಲ್ ಪಂದ್ಯದ ಪ್ರಸಾರದ ವೇಳೆ ಕಂಡುಬಂದಿದ್ದವು. ಇನ್ನು, ಡೆಲ್ಲಿ ತಂಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಡ್ರೆಸ್ಸಿಂಗ್ ರೂಂ ಒಳಗಿನ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಸಾದ್ ಅದರಲ್ಲೂ ಕಾಣಿಸುತ್ತಾರೆ. ತಂಡದ ಕೋಚಿಂಗ್ ಸಿಬ್ಬಂದಿಯಾಗದಿದ್ದರೆ, ಪ್ರಸಾದ್‌ಗೆ ಮೈದಾನಕ್ಕೆ, ಡಗೌಟ್‌ಗೆ ಪ್ರವೇಶವೇ ಸಿಗುವುದಿಲ್ಲ. ಹೀಗಾಗಿ, ಪ್ರಸಾದ್ ತಂಡದ ಕೋಚ್ ಅಥವಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗುತ್ತದೆ.
ಬಿಸಿಸಿಐನ ನಿಯಮ 38(4) ಪ್ರಕಾರ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಹುದ್ದೆಯಲ್ಲಿರುವಂತಿಲ್ಲ. ಪ್ರಸಾದ್ ರಾಜ್ಯ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದುಕೊಂಡು, ತಂಡವೊಂದರ ಕೋಚಿಂಗ್ ಸಿಬ್ಬಂದಿಯಾಗಿರುವುದು ಖಂಡಿತವಾಗಿಯೂ ಸ್ವಹಿತಾಸಕ್ತಿ ಸಂಘರ್ಷಕ್ಕೆ ಒಳಪಡುತ್ತದೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಕ್ರಿಕೆಟ್ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ಪ್ರಸಾದ್, ಈಗ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ರಾಜ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿದೆ. ಕಳೆದ ತಿಂಗಳಷ್ಟೇ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಭಾರೀ ಕುತೂಹಲ ಮೂಡಿಸಿದ್ದ, ಕೋರ್ಟ್ ಮೆಟ್ಟಿಲೇರಿದ್ದ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್‌ರ ತಂಡ ಜಯಭೇರಿ ಬಾರಿಸಿತ್ತು. ಅಧ್ಯಕ್ಷರಾಗುತ್ತಿದ್ದಂತೆ ಕಾರ್ಯಪ್ರವೃತರಾಗಿದ್ದ ಪ್ರಸಾದ್, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್ ವಾಪಸ್ ತರಲು ಪ್ರಯತ್ನ ಆರಂಭಿಸಿದ್ದರು. ನ್ಯಾ.ಕುನ್ಹಾ ಸಮಿತಿ ಶಿಫಾರಸಿನಂತೆ ಕೆಎಸ್‌ಸಿಎನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಪ್ರಸಾದ್ ನುಡಿದಂತೆ ನಡೆಯುತ್ತಿದ್ದಾರೆ ಎನ್ನುವಾಗಲೇ ಅವರು ವಿವಾದಕ್ಕೆ ತುತ್ತಾಗಿದ್ದಾರೆ. ತಮ್ಮ ವಿರುದ್ಧ ಎದ್ದಿರುವ ಸ್ವಹಿತಾಸಕ್ತಿ ಸಂಘರ್ಷ ವಿವಾದ ಕುರಿತು ಪ್ರತಿಕ್ರಿಯೆ ಕೇಳಲು 'ಕನ್ನಡಪ್ರಭ' ವೆಂಕಟೇಶ್ ಪ್ರಸಾದ್‌ರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿತು. ಅವರಿಗೆ ಕಳುಹಿಸಿದ ವ್ಯಾಟ್ಸ್‌ಆಯಪ್ ಸಂದೇಶಕ್ಕೆ ಪತ್ರಿಕೆ ಮುದ್ರಣಕ್ಕೆ ಹೋಗುವ ವರೆಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ.