ಕಲಬುರಗಿ : ಜಿಲ್ಲೆಯ ಯಡ್ರಾಮಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಸರ್ಕಾರದ ಸಚಿವರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಶಿಕ್ಷಣ ವ್ಯವಸ್ಥೆ, ಪ್ರಾದೇಶಿಕ ಅಸಮಾನತೆ ಮತ್ತು ನರೇಗಾ ಯೋಜನೆ ಕುರಿತು ಖರ್ಗೆ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ತೀವ್ರ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ ಅವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನೇರ ಎಚ್ಚರಿಕೆ ನೀಡಿದರು. 'ನಮ್ಮ ಭಾಗಕ್ಕೆ ಶಾಲೆಗಳು ಬರುತ್ತಿವೆ, ಆದರೆ ಅಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲ. ಶಿಕ್ಷಕರಿಲ್ಲದಿದ್ದರೆ ಗ್ರಾಮೀಣ ಭಾಗದ ಮಕ್ಕಳು ಉದ್ದಾರ ಆಗುವುದು ಹೇಗೆ? ಸಚಿವರೇ, ನಮಗೆ ಕಟ್ಟಡ ಬೇಡ, ಮೊದಲು ಶಿಕ್ಷಕರನ್ನು ಕೊಡಿ. ಬೇಕಿದ್ದರೆ ಮಕ್ಕಳನ್ನು ಗಿಡದ ಕೆಳಗಾದರೂ ಕೂರಿಸಿ ಓದಿಸುತ್ತೇವೆ. ಶಿಕ್ಷಕರ ನೇಮಕಾತಿಯಲ್ಲಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಅವರು 'ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನೋಡಿ ನಾನು ಇಲ್ಲೇ ಹುಟ್ಟಬೇಕಿತ್ತು ಅನಿಸುತ್ತಿದೆ' ಎಂದಿದ್ದಕ್ಕೆ ಖರ್ಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು. 'ಶಿವಕುಮಾರ್ ಅವರೇ, ನೀವು ಇಲ್ಲಿ ಹುಟ್ಟುವುದೂ ಬೇಡ, ನಾವು ಅಲ್ಲಿ ಹುಟ್ಟುವುದೂ ಬೇಡ. ನಮಗೆ ಸಿಂಗಾಪುರ, ಲಂಡನ್ ಕನಸು ಬೇಡ; ಸಿದ್ದರಾಮಯ್ಯ ಅವರ ಮೈಸೂರು ಹೇಗಿದೆ, ನಿಮ್ಮ ಕ್ಷೇತ್ರ ಕನಕಪುರ ಹೇಗಿದೆ ಹಾಗೆ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಿಕೊಡಿ ಸಾಕು. ಬಫೆ ಸಿಸ್ಟಮ್‌ನಲ್ಲಿ ಎಲ್ಲರಿಗೂ ಊಟ ಸಿಗುತ್ತದೆ, ಆದರೆ ಪಂತಿಯಲ್ಲಿ ಕುಳಿತವರಿಗೆ ಸಿಗಲ್ಲ. ನಮ್ಮದು ಪಂತಿಯಲ್ಲಿ ಕುಳಿತ ಸ್ಥಿತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿ ಕನ್ನಡ ಕಲಿತಿದ್ದಾರೆ. ಸರ್ಕಾರಿ ಶಾಲೆಯಲ್ಲೇ ಕಲಿತು ಎರಡು ಬಾರಿ ರಾಜ್ಯದ ಸಿಎಂ ಆಗಿದ್ದಾರೆ. ಡಿಕೆ ಶಿವಕುಮಾರ್ ಅವರೇ ನೀವು ಕಾನ್ವೆಂಟ್‌ನಲ್ಲಿ ಅರ್ಧ ಸರ್ಕಾರಿ ಶಾಲೆಯಲ್ಲಿ ಅರ್ಧ ಕಲಿತಿರಬೇಕು ಅಲ್ವಾ? ಎಂದು ಪ್ರಶ್ನಿಸಿದ ಖರ್ಗೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ ಬಗ್ಗೆ ಮಾತನಾಡುವಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ತಿವಿದರು.