ಕಲಬುರಗಿ: 'ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ 5,800ರಷ್ಟು ಶಿಕ್ಷಕರು ಹೊಸದಾಗಿ ಸೇವೆಗೆ ನಿಯೋಜನೆಗೊಳ್ಳಲಿದ್ದಾರೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಗಮನಕ್ಕಿದ್ದು, ಬೋಧಕರ ಕೊರತೆ ನೀಗಿಸಲು ಒತ್ತು ನೀಡಲಾಗಿದೆ' ಎಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. 'ನಮ್ಮ ಸರ್ಕಾರ ಬಂದ ಬಳಿಕ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಸದ್ಯ ಹೊಸದಾಗಿ 11 ಸಾವಿರ ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವರನ್ನು ಬೋಧನೆಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ' ಎಂದರು.
'ಕಲ್ಯಾಣ ಕರ್ನಾಟಕದಲ್ಲಿ ಕಲಿಕಾ ಗುಣಮಟ್ಟ ಸುಧಾರಣೆ, ಶಿಕ್ಷಕರ ಕೊರತೆ ನೀಗಿಸಲು, ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಕ್ರಮವಹಿಸಲಾಗಿದೆ. ನಮ್ಮ ಸರ್ಕಾರ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಬಿಗಿ ಕ್ರಮಕೈಗೊಂಡ ಫಲವಾಗಿ ಫಲಿತಾಂಶ ಕುಸಿದಿದೆ. ಆದರೆ, ಮುಂದಿನ ಎರಡ್ಮೂರು ವರ್ಷಗಳಲ್ಲಿ ಫಲಿತಾಂಶ ವೃದ್ಧಿಸಲಿದ್ದು, ಮಕ್ಕಳ ಭವಿಷ್ಯಕ್ಕೂ ಒಳ್ಳೆಯದಾಗಲಿದೆ' ಎಂದರು. 'ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಫಲಿತಾಂಶ ವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಲ್ಯಾಣ ಭಾಗದಲ್ಲಿ ಕೆಕೆಆರ್‌ಡಿಬಿ ನೆರವಿನಿನಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಕಾರ್ಯಗತಗೊಳಿಸಲಾಗಿದೆ' ಎಂದರು. 'ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಪರಿಹಾರವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ನೀತಿ ವಿಜ್ಞಾನ ಪಠ್ಯ ಪರಿಚಯಿಸಲು ತೀರ್ಮಾನಿಸಲಾಗಿದೆ' ಎಂದು ಸಚಿವರು ಹೇಳಿದರು.