ಬೆಂಗಳೂರು: ಬಳ್ಳಾರಿ ಗುಂಡಿನ ದಾಳಿಯಲ್ಲಿ ಸಾವಿಗೀಡಾದ ಕಾರ್ಯಕರ್ತನಿಗೆ 25ಲಕ್ಷ ರೂ ನಗದು ಪರಿಹಾರ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಹೊಸ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿದೆ. ರಾಜ್ಯದ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದು, ಹಿಂದೂ ಸಂಘಟನೆಗಳ ಮುಖಂಡ ತೇಜಸ್ ಗೌಡ ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಜನವರಿ 1 ರಂದು ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಹತ್ಯೆಯಾದ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂಪಾಯಿ ಪರಿಹಾರದ ಹಣವನ್ನು ವಿತರಿಸಿದ್ದರು ಎನ್ನಲಾಗಿದೆ. 25 ಲಕ್ಷ ರೂಪಾಯಿ ಹಣವನ್ನು ಬಟ್ಟೆ ಬ್ಯಾಗ್ ನಲ್ಲಿ ಮುಚ್ಚಿ ರಾಜಶೇಖರ್ ರೆಡ್ಡಿ ಅವರ ತಾಯಿಗೆ ನೀಡಿದ್ದರು. ಇದೀಗ ಇದೇ ಹಣ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಸಂಕಷ್ಟ ತಂದೊಡ್ಡಿದೆ. ಮೂಲಗಳ ಪ್ರಕಾರ ಆದಾಯ ತೆರಿಗೆ ನಿಯಮಾವಳಿಗಳಂತೆ 2 ಲಕ್ಷ ರೂಗಿಂತ ಹೆಚ್ಚಿನ ನಗದನ್ನು ಯಾವುದೇ ರೂಪದಲ್ಲಿ ನೀಡುವಂತಿಲ್ಲ. ಆದಾಗ್ಯೂ ಓರ್ವ ಜನಪ್ರತಿನಿಧಿಯಾಗಿ 25ಲಕ್ಷ ರೂ ನಗದನ್ನು ಪರಿಹಾರವಾಗಿ ನೀಡಿರುವುದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ವಿರುದ್ಧ ದೂರು ದಾಖಲಿಸಲಾಗಿದೆ. ಸಚಿವ ಜಮೀರ್ ಹಣ ನೀಡುವ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಜೊತೆಗೆ ಪತ್ರಿಕೆಗಳಲ್ಲೂ 25 ಲಕ್ಷ ರೂಪಾಯಿ ಅನ್ನು ಸಂಪೂರ್ಣವಾಗಿ ನಗದು ರೂಪದಲ್ಲೇ ನೀಡುವ ಪೋಟೋಗಳು ಕೂಡ ಪ್ರಕಟವಾಗಿವೆ. ಇವುಗಳ ಆಧಾರದ ಮೇಲೆ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಮ್ಮ ದೇಶದಲ್ಲಿ 2017-18 ರಲ್ಲಿ ಆರ್‌ಬಿಐ ನಿರ್ದೇಶನ ಹಾಗೂ ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಬೇರೆಯವರಿಗೆ ನೀಡುವಂತಿಲ್ಲ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬೇರೆಯವರಿಂದ ಪಡೆಯುವಂತಿಲ್ಲ. ಇದು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269ST ಸೆಕ್ಷನ್‌ಗೆ ವಿರುದ್ಧವಾಗಿದೆ. ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269ರ ಅಡಿ ಯಾರೇ ಆಗಲಿ ದಿನವೊಂದಕ್ಕೆ ಬೇರೊಬ್ಬರಿಗೆ 2 ಲಕ್ಷ ರೂಪಾಯಿ ಹಣವನ್ನು ಮಾತ್ರ ನಗದು ರೂಪದಲ್ಲಿ ನೀಡಲು ಅವಕಾಶ ಇದೆ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಚೆಕ್, ಡಿ.ಡಿ. ಮೂಲಕವೇ ನೀಡಬೇಕು. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ವಸತಿ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, 25 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ಮೃತ ರಾಜಶೇಖರ್ ರೆಡ್ಡಿ ತಾಯಿಗೆ ನೀಡಿದ್ದಾರೆ. ಹೀಗಾಗಿ ಇದು ಐಟಿ ಇಲಾಖೆಯ ಕಾಯಿದೆ, ಸೆಕ್ಷನ್ ಗಳ ಉಲಂಘನೆಯಾಗಿದೆ. ಹೀಗಾಗಿ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮುಖಂಡ ತೇಜಸ್ ಗೌಡ, ಆದಾಯ ತೆರಿಗೆ ಇಲಾಖೆಯ ಬೆಂಗಳೂರು , ಗೋವಾದ ಡೈರೆಕ್ಟರ್ ಜನರಲ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.