ಬೆಂಗಳೂರು : ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು ಅಕ್ರಮ ನಿವಾಸಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದ್ದು, ಮನೆ ಕಳೆದುಕೊಂಡವರ ಪೈಕಿ ಹೊಸ ಮನೆ ಪಡೆಯಲು ಸಲ್ಲಿಕೆಯಾಗಿದ್ದ 262 ಅರ್ಜಿಗಳ ಪೈಕಿ ಕೇವಲ 37 ಮಂದಿ ಮಾತ್ರ ಅರ್ಹರಾಗಿದ್ದಾರೆ ಎನ್ನಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಕಠಿಣ ಷರತ್ತುಗಳ ಅನ್ವಯ ಅಧಿಕಾರಿಗಳು ಅಂತಿಮ ಹಂತದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು 262 ಮಂದಿ ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಬೆಂಗಳೂರಿನಲ್ಲಿ ದೀರ್ಘಕಾಲದಿಂದ ವಾಸವಿರುವ 37 ಮಂದಿಯನ್ನು ಮಾತ್ರ ಮನೆ ಪಡೆಯಲು ಅರ್ಹರು ಎಂದು ಗುರುತಿಸಲಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜಿಬಿಎ (GBA) ಅಧಿಕಾರಿಗಳು ಸಚಿವ ಕೃಷ್ಣಬೈರೇಗೌಡ ಹಾಗೂ ಸಚಿವ ಜಮೀರ್ ಅಹ್ಮದ್ ಅವರಿಗೆ ನೀಡಿದ್ದಾರೆ. ವರದಿಯೊಂದರ ಪ್ರಕಾರ, ತೆರವುಗೊಳಿಸಲಾದ ಮನೆಗಳ ಸಂಖ್ಯೆ 83 ಆಗಿದ್ದರೂ, 119 ಮನೆಗಳ ಸರ್ವೇ ನಡೆಸಲಾಗಿತ್ತು. ಇದರಲ್ಲಿ 118 ಮಂದಿ ಆಧಾರ್ ಕಾರ್ಡ್ ಹೊಂದಿದ್ದರೆ, ಕೇವಲ 77 ಕುಟುಂಬಗಳ ಬಳಿ ರೇಷನ್ ಕಾರ್ಡ್ ಇದೆ. ಆದಾಯ ಪ್ರಮಾಣ ಪತ್ರ ಕೇವಲ 63 ಕುಟುಂಬಗಳ ಬಳಿ ಮಾತ್ರ ಇರುವುದು ಪತ್ತೆಯಾಗಿದೆ.
ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಚುರುಕು ನಿಡಲಾಗಿದೆ. ಶತಾಯ ಗತಾಯ ಇವ್ತೇ ಪಟ್ಟಿ ಫೈನಲ್ ಮಾಡಲು ಸರ್ಕಸ್ ಮಾಡಲಾಗುತ್ತಿದೆ. ಕಳೆದ ಚುನಾವಣೆಯ ಮತದಾನದ ಪಟ್ಟಿ ಪರಿಶೀಲನೆ ಮಾಡಲಾಗುತ್ತಿದೆ. ಇಲ್ಲಿರುವ ಜನರು ವೋಟ್ ಹಾಕಿದ್ದಾರಾ ಅನ್ನೋದರ ಪರಿಶೀಲನೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳಿಂದ ಕರೆಂಟ್ ಕನೆಕ್ಷನ್ ಹೇಗೆ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರದಿಂದ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಆದರೂ, ಇವರು ಯಾವಾಗ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇದಕ್ಕೆ ಏನೆಲ್ಲಾ ಆಧಾರಗಳನ್ನು ಒದಗಿಸಿದ್ದಾರೆ ಎಂಬ ಮಾಹಿತಿ ಕಲೆಹಾಕಲಾಗಿದೆ. ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ಬಳಿ ಕಳೆದ 5 ವರ್ಷದ ಡಾಕ್ಯುಮೆಂಟ್ ಇದೆಯಾ ಅನ್ನೋದರ ಪರಿಶೀಲನೆ ಕಾರ್ಯವನ್ನು ಮಾಡಲಾಗಿದೆ. ಇದರಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಯಾವಾಗ ವಿತರಣೆಯಾಗಿದ್ದು ಅನ್ನೋದರ ತನಿಖೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.