image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತ : ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ

ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತ : ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ

ಕಲಬುರಗಿ : ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತದ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದ ಡಿಸಿ ಕಚೇರಿಗೆ ಭೇಟಿ ನೀಡಿದ ನ್ಯಾ.ಪಾಟೀಲ ಅವರು ಸುಮಾರು ಒಂದು ಗಂಟೆ ಕಾಲ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಜಿಲ್ಲೆಯಾದ್ಯಂತ 55 ಅರ್ಜಿಗಳ ಪೈಕಿ ಏಳು ಪ್ರಕರಣಗಳಲ್ಲಿ ಮಾತ್ರ ಭೂಮಿ ಹಂಚಿಕೆ ಮಾಡಲಾಗಿದೆ. ದೇಶಕ್ಕಾಗಿ ತಮ್ಮ ಕುಟುಂಬವನ್ನು ಮರೆತು ಹೋರಾಟ ಮಾಡಿದ ಮಾಜಿ ಸೈನಿಕರ ಬೇಡಿಕೆಯನ್ನು ಈಡೇರಿಸದೇ ಇರುವುದು ಸರಿಯಲ್ಲ. ಕೂಡಲೇ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಿ ಅದರ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ತಾಕೀತು ಮಾಡಿದರು.

ಕೆರೆಗಳ ಒತ್ತುವರಿ, ಭೂ ವ್ಯಾಜ್ಯ ಪ್ರಕರಣಗಳು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆ ವಿಭಾಗ, ಸಿಎಸ್‌ಆರ್‌, ಪಿಡಿ ಖಾತೆ, ಪಿಂಚಣಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಸೂಕ್ತ ಮಾಹಿತಿ ನೀಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದಲ್ಲಿ ಬಾಕಿ ಇರುವ ಕಂದಾಯ ಇಲಾಖೆಯ 46 ಪ್ರಕರಣಗಳ ಪೈಕಿ 18 ಇತ್ಯರ್ಥಕ್ಕೆ ಬಾಕಿ ಇವೆ ಎಂಬುದನ್ನು ವಿಷಯ ನಿರ್ವಾಹಕರ ಲೋಕಾಯುಕ್ತರ ಗಮನಕ್ಕೆ ತಂದರು. ಕಳೆದ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗಿನ ಮಾಹಿತಿಯನ್ನು ನೀಡುವಂತೆ ನ್ಯಾ.ಬಿ.ಎಸ್.ಪಾಟೀಲ ಅವರು ಸೂಚಿಸಿದರು. ಮಾಹಿತಿಗೆ ಕೆಲ ಸಿಬ್ಬಂದಿ ತಡಬಡಾಯಿಸಿದಾಗ ನೆರವಿಗೆ ಬಂದ ಎಡಿಸಿ ರಾಯಪ್ಪ ಹುಣಸಗಿ ಹಾಗೂ ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ ಅಗತ್ಯ ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ 254 ಕೆರೆಗಳ ಪೈಕಿ ಕೇವಲ ಆರು ಕೆರೆಗಳು ಒತ್ತುವರಿಯಾಗಿವೆ ಎಂಬ ಮಾಹಿತಿಯನ್ನು ಪಡೆದ ಲೋಕಾಯುಕ್ತರು ಅಚ್ಚರಿ ವ್ಯಕ್ತಪಡಿಸಿದರು. ನೀವು ನೀಡುವ ಮಾಹಿತಿ ಸರಿ ಇದೆಯೇ ಎಂದು ಪ್ರಶ್ನಿಸಿದರು. ಒಂದು ವೇಳೆ ಆರಕ್ಕಿಂತ ಹೆಚ್ಚು ಕೆರೆಗಳು ಒತ್ತುವರಿಯಾಗಿದ್ದರೆ ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Category
ಕರಾವಳಿ ತರಂಗಿಣಿ