image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ : ಕುಮಾರಸ್ವಾಮಿ

ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ : ಕುಮಾರಸ್ವಾಮಿ

ಬೆಂಗಳೂರು : ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಎಚ್ ಡಿ  ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. 'ಎರಡು ಬಾರಿ ಶವ ಪರೀಕ್ಷೆ ಮಾಡಿದ್ದೀರಿ? ಮೊದಲ ಬಾರಿ ಏನು ವರದಿ ಬಂತು? ಎರಡನೇ ಬಾರಿ ಯಾರು ಒತ್ತಾಯ ಮಾಡಿದರು? ಯಾರ ಅನುಮತಿಯಲ್ಲಿ ಮತ್ತೆ ಶವ ಪರೀಕ್ಷೆ ನಡೆಸಲಾಯಿತು? ಯಾರನ್ನು ಮೆಚ್ಚಿಸಲು ಈ ಆದೇಶ' ಎಂದು ಕುಮಾರಸ್ವಾಮಿ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ತೆಗೆಯಲಾಗಲಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ಕಾರಣವೇನು? ಇದನ್ನು ಸಮಗ್ರವಾಗಿ ತನಿಖೆ ಮಾಡುತ್ತೀರಾ ಅಥವಾ ನ್ಯಾಯವನ್ನು ಮರೆಮಾಚುತ್ತೀರಾ? ರಾಜ್ಯದ ಜನರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯನ್ನೇ ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಹತ್ಯೆಯಾಗಿದೆ. ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯನ್ನು ಬಂಧಿಸಿದ್ದೀರಾ ಅಥವಾ ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಗಲಭೆ ಪ್ರಕರಣದಲ್ಲಿ ಬಳ್ಳಾರಿ ಎಸ್‌ಪಿಯನ್ನು ಮಾತ್ರ ಅಮಾನತು ಮಾಡಲಾಗಿದೆ. ಐಜಿ, ಎಎಸ್ಪಿ, ಡಿವೈಎಸ್‌ಪಿ ಅವರಿಗೆ ಬಳ್ಳಾರಿಯ ಹಿನ್ನೆಲೆ ಗೊತ್ತಿರಲಿಲ್ಲವೇ? ಅವರನ್ನು ಯಾಕೆ ಅಮಾನತು ಮಾಡಿಲ್ಲ ಎಂದು ಹೆಚ್​ಡಿಕೆ ಪ್ರಶ್ನಿಸಿದರು. ಯಾವ ಅಧಿಕಾರಿಗಳು ನಿಜವಾದ ಹೊಣೆಗಾರರು ಎಂಬುದನ್ನು ಸರ್ಕಾರ ಜನರ ಮುಂದೆ ಇಡಬೇಕು ಎಂದು ಅವರು ಆಗ್ರಹಿಸಿದರು. ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಪ್ರವೇಶಕ್ಕೆ ಅನುಮತಿ ನೀಡಿದ ಬಳಿಕ ಎಷ್ಟು ಗಲಭೆಗಳು ನಡೆದಿವೆ ಎಂಬ ವಿವರಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದರು. ಜನವರಿ 3ರಂದು ನಡೆದ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿತ್ತೇ? ಅನುಮತಿ ಇಲ್ಲದಿದ್ದರೆ ಯಾವ ಅಧಿಕಾರದ ಆಧಾರದ ಮೇಲೆ ಕಾರ್ಯಕ್ರಮ ನಡೆಸಲಾಯಿತು ಎಂದು ಅವರು ಪ್ರಶ್ನಿಸಿದರು. ಮೃತ ರಾಜಶೇಖರ್ ಕುಟುಂಬಕ್ಕೆ ಮೂಟೆಯಲ್ಲಿ ತೆಗೆದುಕೊಂಡು ಹೋಗಿ ಕೊಟ್ಟ‌ 25 ಲಕ್ಷ ರೂಪಾಯಿ ಯಾರ ಹಣ? ಸರ್ಕಾರದ ಹಣವೇ ಅಥವಾ ಖಾಸಗಿ ಹಣವೇ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಸಿಬಿಐ ತನಿಖೆ ಹೊರತುಪಡಿಸಿ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ವಿಪಕ್ಷ ನಾಯಕರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಡಿಸಿಎಂ ಶಾಸಕರ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕುಮಾರಸ್ವಾಮಿ ಹೇಳಿದರು. 'ರಾಜ್ಯ ಸರ್ಕಾರ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇತಿಹಾಸ ನಿಮ್ಮ ಆಡಳಿತವನ್ನು ಹೇಗೆ ದಾಖಲಿಸಲಿದೆ ಎಂಬುದನ್ನು ನೀವು ಯೋಚಿಸಬೇಕು' ಎಂದು ಕುಮಾರಸ್ವಾಮಿ ಕಾಂಗ್ರೆಸ್​​ಗೆ ಎಚ್ಚರಿಕೆ ನೀಡಿದರು. ಬಳ್ಳಾರಿ ಗಲಭೆ ಪ್ರಕರಣದಲ್ಲಿ ಐಜಿ, ಎಎಸ್ಪಿ ಹಾಗೂ ಡಿವೈಎಸ್‌ಪಿಯನ್ನು ಕೂಡ ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಳ್ಳಾರಿ ಗಲಭೆ ಪ್ರಕರಣ ಸಂಬಂಧ ಇಬ್ಬರನ್ನು ಹೋಟೆಲ್​ನಲ್ಲಿ ಇಟ್ಟುಕೊಂಡು ತನಿಖೆ ಮಾಡುತ್ತಿದ್ದಾರಂತೆ. ಮಾಜಿ ಪ್ರಧಾನಿ ಮಗನ್ನು (ಹೆಚ್​ಡಿ ರೇವಣ್ಣ ಬಂಧಿಸಿದ್ದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ) ಮನೆಗೆ ನುಗ್ಗಿ ಅರೆಸ್ಟ್ ಮಾಡಿಸಿದ್ದೀರಿ. ಅವರೇನು ಅಂತಹ ತಪ್ಪು ಮಾಡಿದ್ದರು? ಎಲ್ಲಾ ನೆನಪು ಇಟ್ಟುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Category
ಕರಾವಳಿ ತರಂಗಿಣಿ