image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲು!

ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲು!

ಬಳ್ಳಾರಿ - ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್‌ ಅಳವಡಿಕೆ ವಿಚಾರವಾಗಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರಾದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಹಾಗೂ ಅಲಿಖಾನ್‌, ದಮೂರ ಶೇಖರ್‌, ಮೋತ್ಕರ್‌ ಶ್ರೀನಿವಾಸ್‌‍, ಪ್ರಕಾಶ್‌ ರೆಡ್ಡಿ, ರಮಣ, ಪಾಲನ್ನ, ದಿವಾಕರ್‌ ,ಮಾರುತಿ ಪ್ರಸಾದ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನಾಳೆ ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿ ಕೊಂಡಿರುವ ಹಿನ್ನಲೆಯಲ್ಲಿ ಹವಂಬಾವಿ ನಗರದಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂಭಾಗ ನಿನ್ನೆ ಸಂಜೆ ಬ್ಯಾನರ್‌ ಅಳವಡಿಕೆ ಮಾಡಲು ಒಂದು ಗುಂಪು ಹೋಗಿತ್ತು. ಆ ಸಂದರ್ಭದಲ್ಲಿ ಶಾಸಕರ ಮನೆ ಮುಂದೆ ಬ್ಯಾನರ್‌ ಅಳವಡಿಸದಂತೆ ಕೆಲವರು ತಡೆದಿದ್ದಾರೆ. ಇದೇ ಕಾರಣಕ್ಕೆ ಗಲಾಟೆ ಪ್ರಾರಂಭವಾಗಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿ ಶಾಸಕ ಭರತ್‌ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದೇ ವೇಳೆಗೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್‌‍ ಶಾಸಕ ನಾರಾ ಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್‌ ಮಾಡಿ ಜನರನ್ನು ಚದುರಿಸಿದ್ದಾರೆ.

ಅಷ್ಟಾದರೂ ಕಾರ್ಯಕರ್ತರು ಸ್ಥಳದಿಂದ ಕದಲಲಿಲ್ಲ ಆ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಈ ನಡುವೆಯೇ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್‌ ಮಾಡಿದ್ದರಿಂದ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಎಂಬುವವರಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ಈ ನಡುವೆ ಯಾರು ಹಾರಿಸಿದ ಗುಂಡಿನಿಂದ ರಾಜಶೇಖರ್‌ ಮೃತಪಟ್ಟಿದ್ದಾರೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.ಅಲ್ಲದೇ ಶಾಸಕ ಭರತ್‌ ರೆಡ್ಡಿ ಬೆಂಬಲಿಗ ಸತೀಶ್‌ ರೆಡ್ಡಿ ಎಂಬುವವರಿಗೂ ಗಂಭೀರ ಗಾಯಗೊಂಡಿದ್ದು,ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ಬ್ಯಾನರ್‌ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ್‌ ಅವರ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಪಾಡಿಗೆ ನಾವು ಇದ್ದೆವು. ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು. ಇಲ್ಲಿ ನೋಡಿದರೆ ಈ ರೀತಿಯಾಗಿದೆ ಎಂದು ಶವಗಾರದ ಬಳಿ ಮೃತನ ತಾಯಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು.

Category
ಕರಾವಳಿ ತರಂಗಿಣಿ