ಬೆಂಗಳೂರು : ಯಲಹಂಕದ ಕೋಗಿಲು ಲೇಔಟ್ ಕ್ರಾಸ್‌ನಲ್ಲಿನ ಅಕ್ರಮ ಗುಡಿಸಲುಗಳ ತೆರವು ಮಾಡಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ 'ಬುಲ್ಡೋಜರ್ ಕ್ರಮ' ಎಂದು ಟೀಕೆ ಮಾಡಿ, ಬೆನ್ನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೋಗಿಲು ಲೇಔಟ್‌ನ ಅಕ್ರಮ ಮನೆಗಳನ್ನು ತೆರವು ಮಾಡಿದ ವಿಚಾರ ದೊಡ್ಡದಾದ ಬಳಿಕ ಸಿಎಂ ಸಿದ್ದರಾಮಯ್ಯ ಮನೆ ಕಳೆದುಕೊಂಡವರಿಗೆ ಸರ್ಕಾರದ ಫ್ಲ್ಯಾಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೇರಳದ ವರ್ಕಲಾದಲ್ಲಿ ನಡೆಯುತ್ತಿರುವ 93ನೇ ಶಿವಗಿರಿ ತೀರ್ಥಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಲು ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಪರಂಪರೆಗೆ ಗೌರವ ಸಲ್ಲಿಸಲು ತೆರಳಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರ ಭಾಷಣಕ್ಕೂ ಮೊದಲೇ ವಿಜಯನ್ ಕಾರ್ಯಕ್ರಮದಿಂದ ನಿರ್ಗಮಿಸಿದರು. ಆದರೆ, ಹೊರಡುವ ಮೊದಲು, ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ಆತ್ಮೀಯವಾಗಿ ಮಾತನಾಡಿದರು.