ಬಬಲೇಶ್ವರ : ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಎರಡು ವಾರಗಳ ಬಳಿಕ ಕೊಲ್ಹಾಪುರದ ಕನೇರಿ ಕಾಡಸಿದ್ಧೇಶ್ವರ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಸೋಮವಾರ ನಾಡಿನ ನೂರಾರು ಮಠಾಧೀಶರು, ಸಾವಿರಾರು ಭಕ್ತರೊಡಗೂಡಿ ಬಬಲೇಶ್ವರ ಪಟ್ಟಣದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ 'ಬಲ' ಪ್ರದರ್ಶನ ಮಾಡಿದರು. ಕನೇರಿ ಶ್ರೀಗೆ ಸ್ವಾಗತ ಕೋರುವ ಬ್ಯಾನರ್, ಕಟೌಟ್‌ಗಳು, ಸ್ವಾಗತ ಕಮಾನುಗಳು ಬಬಲೇಶ್ವರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ರಾರಾಜಿಸುತ್ತಿದ್ದವು. 'ಕರ್ನಾಟಕದ ಯೋಗಿ' ಎಂಬ ಘೋಷಣೆಗಳನ್ನು ಭಕ್ತರು ಮೊಳಗಿಸಿದರು. ಪುಷ್ಪವೃಷ್ಟಿಗೈಯುವ ಮೂಲಕ ಭಕ್ತರು ವಿಜಯಪುರ ಜಿಲ್ಲೆಗೆ ಅದ್ದೂರಿಯಾಗಿ ಸ್ವಾಗತಿಸಿದರು. ವಿಜಯಪುರದಿಂದ ಬಬಲೇಶ್ವರದವರೆಗೆ ಸಾವಿರಾರು ಯುವಕರು ಬೈಕ್ ರ‍್ಯಾಲಿ ನಡೆಸಿದರು. ಬಬಲೇಶ್ವರ ಪಟ್ಟಣದ ಶಾಂತವೀರ ವೃತ್ತದಿಂದ ಸಮಾವೇಶ ಆಯೋಜಿಸಲಾಗಿದ್ದ ಶಾರದಾ ಶಾಲೆಯ ಆವರಣದವರೆಗೆ ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಕನೇರಿಶ್ರೀಗಳಿಗೆ ಭವ್ಯವಾಗಿ ಬರಮಾಡಿಕೊಂಡರು.
ಬೃಹತ್ ತೆರೆದ ವೇದಿಕೆಯಲ್ಲಿ ನಾಡಿನ ವಿವಿಧ ಮಠಾಧೀಶರು ಮತ್ತು ಜನಪ್ರತಿನಿಧಿಗಳು, ಮುಖಂಡರು ಬಗೆಬಗೆಯ ಧಾನ್ಯಗಳನ್ನು ಮಡಿಕೆಗೆ ಸುರಿಯುವ ಮೂಲಕ ಉದ್ಘಾಟಿಸಿದರು. ಕನೇರಿ ಸ್ವಾಮೀಜಿ ಸೇರಿದಂತೆ ಎಲ್ಲ ಸ್ವಾಮೀಜಿಗಳಿಗೆ ಕೇಸರಿ ಶಲ್ಯವನ್ನು ಸಮರ್ಪಿಸಲಾಯಿತು. ಜೈ ಶ್ರೀರಾಮ್, ಭಾರತ ಮಾತಾಕಿ ಜೈ ಘೋಷಣೆಗಳ ಜೊತೆಗೆ ಶಂಖ, ಕಹಳೆ ವಾದನ ಮೊಳಗಿತು. ಡಾ. ಉಪಾದ್ಯ ಬರೆದ 'ಬಸವ ಶೈವದಲ್ಲಿ ಹಿಂದುತ್ವ' ಪುಸ್ತಕ ಬಿಡುಗಡೆ ಮಾಡಲಾಯಿತು. ಬೈಲೂರು ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದೇವರು ವಿವಿಧ ವೇದಿಕೆಗಳಲ್ಲಿ ಈ ಹಿಂದೆ ಹಿಂದೂ ಧರ್ಮ, ದೇವರನ್ನು ವಿರೋಧಿಸಿ ಮಾಡಿರುವ ಭಾಷಣಗಳ ಧ್ವನಿ ಮುದ್ರಿಕೆಯನ್ನು ಸಮಾವೇಶದಲ್ಲಿ ಭಕ್ತರಿಗೆ ಕೇಳಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆಯಿಂದಲೂ ನೂರಾರು ವಾಹನಗಳಲ್ಲಿ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭಕ್ತರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.