image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈಲ್ವೆ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ : ವಿ ಸೋಮಣ್ಣ

ರೈಲ್ವೆ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ : ವಿ ಸೋಮಣ್ಣ

ರಾಮನಗರ: 'ರೈಲ್ವೆ ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಂದ್ರವು ಸಮುದ್ರವಿದ್ದಂತೆ. ಅದನ್ನು ಸುಮ್ಮನೆ ಟೀಕಿಸುವ ಬದಲು, ಅಲ್ಲಿ ಏನು ಸಿಗುತ್ತದೊ ಅದನ್ನು ಕೇಳಿ ಪಡೆಯಬೇಕು' ಎಂದು‌ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಪಟ್ಟಣದ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನನೆಗುದಿಗೆ ಬಿದ್ದಿರುವ ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗದ ಯೋಜನೆಯ ಫೈಲ್ ಕೊಡಿ ಎಂದು ನಾನು ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಕೇಳಿದರೂ ಸ್ಪಂದಿಸಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. 'ಚಾಮರಾಜನಗರದ ಹಿಂದಿನ ಸಂಸದ ಧ್ರುವ ನಾರಾಯಣ್ ಇಲಾಖೆಗೆ ಈ ಯೋಜನೆಯ ಪ್ರಸ್ತಾವ ಕಳಿಸಿದ್ದರು. ಆಗ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದ್ದರು. ನಾನೂ ಕನಕಪುರದವನಾಗಿದ್ದು, ನನ್ನ ತಲೆ ತುಂಬಾ ಅದೇ ಇದೆ. ಯೋಜನೆ ಜಾರಿಗೆ ನಾನೀಗ ಸಿದ್ದನಿದ್ದೇನೆ. ಅದಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿ' ಎಂದರು.

'ಯೋಜನೆ ಕುರಿತು ನಾನೀಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವರಿಗೆ ಪತ್ರ ಬರೆದೆ. ಇದುವರೆಗೆ ಯಾರೂ ಸ್ಪಂದಿಸಿಲ್ಲ. ನೀವಾದರೂ ಸಿದ್ದರಾಮಯ್ಯ ಅವರಿಗೆ ಹೇಳಿ ಭೂಮಿ ಕೊಡಿಸಿ. ನಾವು ಯೋಜನೆ ಅನುಷ್ಠಾನಗೊಳಿಸುತ್ತೇವೆ' ಎಂದು ಪಕ್ಕದಲ್ಲಿದ್ದ ಶಾಸಕ ಬಾಲಕೃಷ್ಣ ಅವರತ್ತ ನೋಡಿ ಹೇಳಿದರು. 'ಹೆಜ್ಜಾಲದಿಂದ ಚಾಮರಾಜನಗರಕ್ಕೆ 142 ಕಿ.ಮೀ. ಇದೆ. ಹೆಜ್ಜಾಲದಿಂದ ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ಸಾತನೂರು, ಹಲಗೂರು, ಮಳವಳ್ಳಿ, ಕೊಳ್ಳೇಗಾಲ, ಸಂತೆಮಾರನಹಳ್ಳಿ, ಯಳಂದೂರು ಹಾಗೂ ಚಾಮರಾಜನಗರದ ನಡುವೆ ಸುಮಾರು 9 ನಿಲ್ದಾಣಗಳು ಬರಲಿವೆ' ಎಂದು ತಿಳಿಸಿದರು. ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, 'ನಾವು ಭೂಮಿ ಕೊಡುತ್ತೇವೆ. ಭೂ ಸ್ವಾಧೀನ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಿ' ಎಂದು ಒತ್ತಾಯಿಸಿದರು. ಅದಕ್ಕೆ ಸೋಮಣ್ಣ, 'ಇವೆಲ್ಲಾ ದೊಡ್ಡ ಯೋಜನೆಗಳಾಗಿದ್ದು, ಇದಕ್ಕೆ ಹಣದ ವಿಷಯವೇ ದೊಡ್ಡ ಗ್ರಹಚಾರವಾಗಿದೆ' ಎಂದರು. ಆಗ ಬಾಲಕೃಷ್ಣ, 'ಇದ್ಯಾವ ದೊಡ್ಡ ಯೋಜನೆ ಸರ್. ನಿಮಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧ್ಯವಾಗದು ಎಂಬುದನ್ನೆಲ್ಲಾ ಸಾಧ್ಯ ಮಾಡಿದವರು ನೀವು' ಎಂದಾಗ, ಸಚಿವರು ನಕ್ಕು ಸುಮ್ಮನಾದರು. 'ವಂಡರ್‌ಲಾಗೆ ಹೋಗುವ ಮಾರ್ಗದಲ್ಲಿರು ರೈಲ್ವೆ ಮೇಲ್ಸೇತುವೆ ಕಿರಿದಾಗಿದ್ದು, ಅದನ್ನು ಅಗಲ ಮಾಡಬೇಕು' ಎಂದು ಬಾಲಕೃಷ್ಣ ಒತ್ತಾಯಿಸಿದರು. ಅದಕ್ಕೆ ಸಚಿವರು, 'ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ