ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಮುರಿದು ದೀರ್ಘಾವಧಿ ಕಾಲ ಆಡಳಿತ ನಡೆಸಿದ ಕರ್ನಾಟಕದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಧವಿಧ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಭ್ರಮದ ಭಾಗವಾಗಿ ಬೆಂಗಳೂರಿನಲ್ಲಿ ಜನವರಿ 6ರಂದು ಅಹಿಂದ ಯುವ ಸಮುದಾಯ ನಾಟಿಕೋಳಿ ಔತಣಕೂಟವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪೋಸ್ಟರ್ ಅನ್ನು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ಶುಕ್ರವಾರ ಬಿಡುಗಡೆ ಮಾಡಿದರು. ಅಹಿಂದ ಯುವ ಸಮುದಾಯದ ಮುಖಂಡರು ಈ ವೇಳೆ ಹಾಜರಿದ್ದರು. ಉದ್ದೇಶಿತ ಔತಣಕೂಟದಲ್ಲಿ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ವಿರೋಧಿಸುವುದಕ್ಕಾಗಿ ಅಹಿಂದ, ಹಿಂದುಳಿದ ವರ್ಗಗಳ ಆಹಾರ ಪದ್ಧತಿಯ ಮೇಲೆ ದಾಳಿ ನಡೆಸಲಾಗುತ್ತದೆ. ನಮ್ಮ ಆಹಾರ ಪದ್ಧತಿಯ ವಿರುದ್ಧವಾಗಿ ನಡೆಸುತ್ತಿರುವ ಹೋರಾಟದ ವಿರುದ್ಧವಾಗಿ ನಾವು ಸಾರ್ವಜನಿಕವಾಗಿ 'ನಾಟಿ ಕೋಳಿ ಔತಣಕೂಟ'ವನ್ನು ಮಾಡುತ್ತಿದ್ದೇವೆ. ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಾಗಿ ಈ ಸಮ್ಮೇಳನವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ದೇವರಾಜ ಅರಸು ಅವರು 1972ರಿಂದ 1977ರವರೆಗೆ ಮುಖ್ಯಮಂತ್ರಿಯಾಗಿದ್ದು ನಿರಂತರ 5 ವರ್ಷ ಕಾಲ ಆಡಳಿತ ನಡೆಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ನಂತರ 2ನೇ ಅವಧಿಯಲ್ಲಿ 1 ವರ್ಷ 318 ದಿನ ಆಡಳಿತ ನಡೆಸಿದ್ದರು. ಒಟ್ಟು 7 ವರ್ಷ 239 ದಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇಷ್ಟು ವರ್ಷಗಳ ಕಾಲ ರಾಜ್ಯದಲ್ಲಿ ಯಾರೊಬ್ಬರೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸು ದಾಖಲೆಯನ್ನು ಮೀರಿಸಿದ್ದು ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂದು ದಾಖಲೆಗೆ ಪಾತ್ರರಾಗುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ನಿರಂತರ ಆಡಳಿತ ನಡೆಸಿದ ರಾಜ್ಯದ 2ನೇ ಮುಖ್ಯಮಂತ್ರಿ ಎಂಬ ದಾಖಲೆಗೂ ಪಾತ್ರರಾಗಿದ್ದರು.