ಬೆಂಗಳೂರು - ಅಧಿಕಾರ ಹಂಚಿಕೆಯ ವಿಷಯದಲ್ಲಿ ಹೈಕಮಾಂಡ್ ನಾಯಕರ ಅನಾಧಾರಣೆಯಿಂದ ಬೇಸರಗೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ತಮಗೆ ಉಪ ಮುಖ್ಯಮಂತ್ರಿ ಹುದ್ದೆಗಿಂತ ಸಾಮಾನ್ಯ ಕಾರ್ಯ ಕರ್ತನಾಗಿ ಇರುವುದರಲ್ಲೇ ಹೆಚ್ಚು ಖುಷಿ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಅವರು ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿ, ಹೈಕಮಾಂಡ್ ವಿರುದ್ಧ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಎಲ್ಲವೂ ಸರಿ ಇದೆ ಎಂದು ಹೇಳುತ್ತಲೇ ತಮ ಅಸಹನೆ
ಯನ್ನು ಹೊರಹಾಕಿದ್ದಾರೆ. ಹೈಕಮಾಂಡ್ ನಾಯಕರು ತಮಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮುಕ್ತ ಅವಕಾಶ ಗಳನ್ನು ನೀಡಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತೇವೆ. ನನಗೆ 5 ವರ್ಷ ಉಪಮುಖ್ಯಮಂತ್ರಿಯಾಗಿರಬೇಕು ಎಂಬ ಇರಾದೆ ಇಲ್ಲ. 1980ರಿಂದಲೂ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಅದು ನನ್ನ ಶಾಶ್ವತ ಹುದ್ದೆ. ಸಾಮಾನ್ಯ ಕಾರ್ಯಕರ್ತನಾಗಿ ಇರುವುದು ಹೆಚ್ಚು ಖುಷಿ ನೀಡಲಿದೆ ಎಂದು ಹೇಳಿದ್ದಾರೆ. ದೆಹಲಿಯ ಪ್ರವಾಸ ಕೇಂದ್ರ ಸಚಿವರನ್ನು ಭೇಟಿ ಮಾಡುವುದಕ್ಕೆ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಇಲ್ಲಿ ಪಕ್ಷದ ಬೇರೆ ಯಾವ ನಾಯಕರನ್ನು ಭೇಟಿ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲೇ ಇದ್ದಾರೆ. ರಾಹುಲ್ ಗಾಂಧಿಯವರು ನಿನ್ನೆಯಷ್ಟೇ ವಿದೇಶಿ ಪ್ರವಾಸದಿಂದ ಬಂದಿದ್ದಾರೆ. ಅವರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಉಳಿದಂತೆ ಯಾವ ನಾಯಕರು ದೆಹಲಿಯಲ್ಲಿ ಲಭ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನಮಲ್ಲಿ ಯಾವುದೇ ಗೊಂದಲಗಳಿಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಅವರೊಂದಿಗೆ ಉಪಹಾರಕೂಟ ನಡೆಸಿರುವುದು ಒಂದು ಸಹಜವಾದ ಬೆಳವಣಿಗೆ. ಸಾರ್ವಜನಿಕ ಜೀವನದಲ್ಲಿರುವ ತಾವು ದಿನನಿತ್ಯವೂ ಕೈಗಾರಿಕೋದ್ಯಮಿಗಳು, ಜನಸಾಮಾನ್ಯರು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಲೇ ಇರುತ್ತೇನೆ. ಅದನ್ನೆಲ್ಲ ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದರು.
ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದವಾಗಿದೆ ಎಂಬ ತಮ ಹೇಳಿಕೆಯ ಬಗ್ಗೆ ಮತ್ತೊಂದು ಬಾರಿ ಸ್ಪಷ್ಟನೆ ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿದರು. ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಬಗ್ಗೆ ಏನೆಲ್ಲ ಚರ್ಚೆಯಾಗಿದೆ ಎಂಬುದನ್ನು ಬಹಿರಂಗಪಡಿಸಲು ತಾವು ಬಯಸುವುದಿಲ್ಲ. ನಮ ಮುಂದೆ ಈಗಿರುವ ಆದ್ಯತೆ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು. ಕಾರ್ಯಕರ್ತರು ಬೆವರು ಹರಿಸಿ, ತಮ ಜೀವನವನ್ನು ತ್ಯಾಗ ಮಾಡಿ ಪಕ್ಷ ಕಟ್ಟಿದ್ದಾರೆ. ಜನರ ಆಶೀರ್ವಾದದಿಂದ ಭರ್ಜರಿ ಬಹುಮತ ಬಂದಿದೆ. ಈ ಸಂದರ್ಭದಲ್ಲಿ ನಾವು ಜನರಿಗೆ ನೀಡಿದ ವಾಗ್ದಾನಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದರು. ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಸಲು ಮುಂದಾಗಿರುವವರಿಗೆ ಶುಭವಾಗಲಿ ಎಂದು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹಾರೈಸಿದರು.ಕೆ.ಎನ್.ರಾಜಣ್ಣರನ್ನು ಅಫೆಕ್‌್ಸ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದಾಗಿ ಈ ಮೊದಲು ಹೇಳಿದ್ದ ಡಿಕೆಶಿ ಹೇಳಿಕೆಗೆ, ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ತಮಗೆ ಅಧ್ಯಕ್ಷರಾಗುವ ಅವಕಾಶ ಸಿಕ್ಕಿತ್ತು. ಆಗ ಡಿ.ಕೆ.ಶಿವಕುಮಾರ್ ಸಹಕಾರ ಸಚಿವರಾಗಿದ್ದರು ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಎಸ್‌ಎಂ ಕೃಷ್ಣ ಅವರು ಈಗ ಇಲ್ಲ. ನಾವು ಅವರು ಇರುವ ದೇವರ ಬಳಿ ಹೋಗಿ ಸತ್ಯ ಏನೆಂದು ಕೇಳಿಕೊಂಡು ಬರಬೇಕಷ್ಟೆ ಎಂದು ಹೇಳಿದರು. ಬೂತ್ ಮಟ್ಟದ ಕಾರ್ಯಕರ್ತರನ್ನು ಸರಿಯಾಗಿ ನೇಮಿಸದೇ ಇದ್ದಿದ್ದಕ್ಕೆ ಮತಗಳ್ಳತನ ನಡೆದಿದೆ ಎಂದು ರಾಜಣ್ಣ, ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೆ ಅನುಭವ ಕಡಿಮೆ. ತರಬೇತಿ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿದರು.