ಮೈಸೂರು: ಇಂದು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ವೀರಗಾಸೆ, ತಮಟೆ, ಮಂಗಳವಾದ್ಯ ಹಾಗು ಡೂಳ್ಳು ಬಾರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದ ಆವರಣದಲ್ಲಿ 'ನಾವು ನಿಮ್ಮಂದಿಗೆ' ಎಂದು ಪೋಸ್ಟರ್ ಪ್ರದರ್ಶಿಸಿ ಬೆಂಬಲ ಸೂಚಿಸಿದರು. ಡಿಸಿಎಂ, ಸಿಎಂ ಪರ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಎಂ ಅಗಮನದ ಹಿನ್ನೆಲೆಯಲ್ಲಿ ಸ್ವಾಗತಿಸಲು ಬಂದಿದ್ದ ಮುಡಾ ಹಾಲಿ ಅಧ್ಯಕ್ಷ ಮರೀಗೌಡ ಅವರ ವಿರುದ್ಧ ಸಿಎಂ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದರು. "ನಿನ್ನಿಂದಲೇ ಇಷ್ಟೆಲ್ಲವೂ ಆಗಿರುವುದು, ಸಿಎಂ ಪರಿಸ್ಥಿತಿಗೆ ನೀನೇ ಕಾರಣ" ಎಂದು ಹಲ್ಲೆ ನಡೆಸಲೂ ಮುಂದಾದರು. ಈ ವೇಳೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ಮುಡಾ ಅಧ್ಯಕ್ಷರನ್ನು ಕಾರಿನ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಲಾಯಿತು.
ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಭಾಗವಹಿಸುವ ಕೆಡಿಪಿ ಸಭೆಗೆ ನುಗ್ಗಲು ಯತ್ನಿಸಿದ ಬಿಜೆಪಿ ಶಾಸಕ ಶ್ರೀವತ್ಸ ಸೇರಿದಂತೆ ಇತರ ಮುಖಂಡರನ್ನು ಪೊಲೀಸರು ಬಂಧಿಸಿದರು. ಮೂರು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.