ಬೆಂಗಳೂರು : ದೇವನಹಳ್ಳಿ ಸಮೀಪ ಫಾಕ್ಸ್ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯೂ ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ. 300 ಎಕರೆ ಜಾಗದಲ್ಲಿ ತೈವಾನ್ ಮೂಲದ ಫಾಕ್ಸ್ಕಾನ್ ಕಂಪನಿ ನಿರ್ಮಿಸಿರುವ ವಿಶಾಲ ಫ್ಯಾಕ್ಟರಿಯಲ್ಲಿ ನೇಮಕವಾಗಿರವವರಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಎಲ್ಲರೂ ಇನ್ನೂ ಕೂಡ ಎಂಟ್ರಿ ಏಜ್ ಲೆವೆಲ್ನಲ್ಲಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಐಫೋನ್ ಫ್ಯಾಕ್ಟರಿಗೆ ನೇಮಕವಾಗಿರುವವರಲ್ಲಿ ಹೆಚ್ಚಿನವರು ಕೇವಲ 19-24 ವಯೋಮಾನದವರಾಗಿದ್ದು, ಬಹುತೇಕ ಎಲ್ಲರಿಗೂ ಇದೇ ಮೊದಲ ಕೆಲಸವಾಗಿದೆಯಂತೆ. ಪಿಯುಸಿ, ಡಿಪ್ಲೊಮಾ ಮಾಡಿರುವ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು, ಆರು ತಿಂಗಳ ಕಾಲ ತರಬೇತಿ ಕೊಟ್ಟು ಬಳಿಕ ಐಫೋನ್ ಪ್ರೊಡಕ್ಷನ್ ಯುನಿಟ್ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆಯಂತೆ. ಉದ್ಯೋಗಿಗಳಿಗೆಂದೇ ಒಂದು ಟೌನ್ಶಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದೆ.
2024ರ ಏಪ್ರಿಲ್-ಮೇ ತಿಂಗಳಲ್ಲೇ ಇಲ್ಲಿ ಐಫೋನ್-16 ಮಾಡಲ್ ಫೋನ್ಗಳ ಅಸೆಂಬ್ಲಿಂಗ್ ಶುರುವಾಗಿತ್ತು. ಇದೀಗ ಇಲ್ಲಿ ಐಫೋನ್-17 ಪ್ರೋ ಮ್ಯಾಕ್ಸ್ ಮಾಡಲ್ ಫೋನ್ಗಳ ಅಸೆಂಬ್ಲಿಂಗ್ ನಡೆಯುತ್ತಿದೆ. ಈ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಘಟಕ 50,000 ಮಂದಿಗೆ ಕೆಲಸ ಮಾಡುವಷ್ಟು ವಿಶಾಲವಾಗಿದೆ. ತಮಿಳುನಾಡಿನಲ್ಲಿರುವ ಐಫೋನ್ ಫ್ಯಾಕ್ಟರಿಗಿಂತಲೂ ಇದು ಬೃಹತ್ತಾಗಿದೆ. ಭಾರತದಲ್ಲಿ ಐಟಿ ವೃತ್ತಿಪರರಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನೇಮಕಾತಿ ತೀವ್ರತರದಲ್ಲಿ ನಡೆಯುತ್ತಿದೆ. ಈ ವರ್ಷ (2025) 18 ಲಕ್ಷ ಐಟಿ ಹುದ್ದೆಗಳ ನೇಮಕಾತಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ. 16ರಷ್ಟು ಹೆಚ್ಚಿದೆ. ಆದರೆ, ಹೆಚ್ಚಿನ ನೇಮಕಾತಿಗಳು ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳಿಂದಲೇ ಆಗುತ್ತಿದೆ. ಇನ್ಫೋಸಿಸ್, ಟಿಸಿಎಸ್ ಇತ್ಯಾದಿ ಐಟಿ ಸರ್ವಿಸಸ್ ಕಂಪನಿಗಳಿಂದ ನೇಮಕಾತಿ ಮಂದವಾಗಿಯೇ ಇದೆ. ಫಾಕ್ಸ್ಕಾನ್ ಮತ್ತು ಎಚ್ಸಿಎಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸೆಮಿಕಂಡಕ್ಟರ್ ಘಟಕ ಮುಂದಿನ ತಿಂಗಳೇ (2026ರ ಜನವರಿ) ಲೋಕಾರ್ಪಣೆ ಆಗಬಹುದು. ಇದು ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ, ಹಾಗೂ ದೆಹಲಿಗೆ ಸಮೀಪವೇ ಇರುವ ಗೌತಮ್ ಬುದ್ಧ ನಗರ್ನ ಜೇವರ್ ಪ್ರದೇಶದ ಸೆಕ್ಟರ್ 28ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ಡಿಸ್ಪ್ಲೇ ಡ್ರೈವರ್ ಇಂಟಿಗ್ರೇಟೆಡ್ ಸರ್ಕ್ಯೂಟ್ಗಳನ್ನು ತಯಾರಿಸಲಾಗುತ್ತದೆ.