image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 74.10 ಕೋಟಿ ರೂ.ಗಳಲ್ಲಿ ನಿರ್ಮಾಣ

ರಾಜ್ಯಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 74.10 ಕೋಟಿ ರೂ.ಗಳಲ್ಲಿ ನಿರ್ಮಾಣ

ಬೆಂಗಳೂರು : 2025-26ನೆ ಸಾಲಿನಲ್ಲಿ 15ನೆ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 74.10 ಕೋಟಿ ರೂ.ಗಳಲ್ಲಿ ಕೆ.ಟಿ.ಟಿ.ಪಿ ಕಾಯ್ದೆ ಹಾಗೂ ನಿಯಮಗಳುನುಸಾರ ಟೆಂಡರ್ ಆಹ್ವಾನಿಸಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಉಪಕ್ರಮವು ಆಯುಷ್ಮಾನ್ ಭಾರತದ ಪ್ರಮುಖ ಅಂಶವಾಗಿದ್ದು, ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ಮತ್ತು ಸುಧಾರಿತ ಆರೋಗ್ಯ ಫಲಿತಾಂಶಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರುಗೋಡು ಗ್ರಾಮದಲ್ಲಿ 5 ಎಕರೆ ಸರಕಾರಿ ಜಮೀನನ್ನು ಮೆ.ಮುರುಗೋಡು ಬಳೆ ತಯಾರಕರ ಫೌಂಡೇಶನ್‍ಗೆ ಬಳೆ ಕ್ಲಸ್ಟರ್ ಘಟಕಗಳಿಗಾಗಿ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲು 35 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉಚಿತವಾಗಿ ಮಂಜೂರಲು ಮಾಡಲು ಹಾಗೂ ಯೋಜನೆ ವೆಚ್ಚ 9.95 ಕೋಟಿ ರೂ.ಗಳ ಪೈಕಿ ರಾಜ್ಯ ಸರಕಾರದ ಪಾಲು 1.49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ರಾಜ್ಯ ದತ್ತಾಂಶ ಕೇಂದ್ರ ಮತ್ತು ಹತ್ತಿರದ ವಿಪತ್ತು ಚೇತರಿಕಾ ಕೇಂದ್ರಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಸೇವೆಯನ್ನು 143.6 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಐದು ವರ್ಷಗಳ ಅವಧಿಗೆ ಒದಗಿಸಲು ಸೂಕ್ತ ನಿರ್ವಹಣಾ ಸಂಸ್ಥೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗಳ 33.80 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸೆ.3ರಂದು ಹೊರಡಿಸಿರುವ ಸರಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಚೆಕ್-ಡ್ಯಾಂಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು, ಬೆಳಗಾವಿ ತಾಲೂಕಿನ ಹಿಂಡಲಗ ಗ್ರಾಮದಲ್ಲಿ 20 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 'ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು' ಇವರಿಗೆ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ತಾಲೂಕು ಆಡಳಿತ ಕೇಂದ್ರ 'ಪ್ರಜಾಸೌಧ' ನಿರ್ಮಾಣ ಕಾಮಗಾರಿಗಳ 12.49 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ 3 ಎಕರೆ 12 ಗುಂಟೆ ಜಮೀನನ್ನು ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣಕ್ಕಾಗಿ ಕೆಎಸ್ಸಾರ್ಟಿಸಿಗೆ ಉಚಿತವಾಗಿ ಮಂಜೂರು ಮಾಡಲು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿಗೆ ಸೇರಿದ ಝುಂಜರಕೊಪ್ಪ ಗ್ರಾಮದ 1077.17 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ಮುಧೋಳ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ನಿರ್ಮಾಣಕ್ಕಾಗಿ 'ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು' ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತ(439 ಕೋಟಿ ರೂ.)ವನ್ನು ಏಕ ಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕ(262 ಕೋಟಿ ರೂ.)ಗಳನ್ನು ಶೇ.100ರಷ್ಟು ಮನ್ನಾ ಮಾಡುವ 'ಏಕಕಾಲಿಕ' ತೀರುವಳಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರದ ಮುಳ್ಕೋಡು ಗ್ರಾಮದ ಸಮೀಪ ಶರಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್(ಉಪ್ಪು ನೀರು ತಡೆ ಅಣೆಕಟ್ಟು)ಅನ್ನು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ