image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ

ಬೆಂಗಳೂರು : ಬೀಡಿ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ಬಾಕಿ ಇರುವ ಕನಿಷ್ಠ ಕೂಲಿ, 2024ರ ಎಪ್ರಿಲ್ ನಿಂದ ಜಾರಿಗೊಂಡ ಹೊಸ ಕನಿಷ್ಠ ಕೂಲಿ ಸೇರಿದಂತೆ ಬಾಕಿ ಮೊತ್ತವನ್ನು ನೀಡುವಂತೆ ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳೂರು ಮಿನಿವಿಧಾನ ಸೌಧದ ಎದುರು ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಬೀಡಿ ಕಾರ್ಮಿಕರು ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಈ ನಡುವೆ ರಾಜ್ಯ ಕಾರ್ಮಿಕ ಇಲಾಖೆಯು ನ. 27ರಂದು ವಿಕಾಸಸೌಧದಲ್ಲಿ ಸಭೆಯನ್ನು ಆಯೋಜಿಸಿದೆ. ಕಾರ್ಮಿಕ ಸಚಿವರ ನಿರ್ದೇಶನದ ಮೇರಗೆ ಬೀಡಿ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ, ಬಾಕಿ ವೇತನ ಪಾವತಿಸುವ ಹಾಗೂ ಇತರ ಸಮಸ್ಯೆಗಳ ಕುರಿತು ಚರ್ಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಸಂಜೆ 4 ಗಂಟೆಗೆ ಅಗತ್ಯ ಮಾಹಿತಿಗಳೊಂದಿಗೆ ಹಾಜರಿರುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್, ಕರ್ನಾಟಕ ಬೀಡಿ ಇಂಡಸ್ಟ್ರೀಸ್ ಅಸೋಸಿಯೇಶನ್, ಸಣ್ಣ ಬೀಡಿ ಮಾಲಕರ ಸಂಘಗಳ ಪ್ರತಿನಿಧಿಗಳಿಗೆ ಸಭೆಯ ಸೂಚನಾ ಪತ್ರ ರವಾನಿಸಿದೆ.

ರಾಜ್ಯ ಸರಕಾರ 2018ರ ಎಪ್ರಿಲ್ ನಲ್ಲಿ ಬೀಡಿ ಕಾರ್ಮಿಕರ ಕನಿಷ್ಟಕೂಲಿ ಅಧಿಸೂಚನೆ ಹೊರಡಿಸಿತ್ತು. ಸಾವಿರ ಬೀಡಿಗೆ ಆ ಸಮಯದಲ್ಲಿ 210 ರೂ. ಹಾಗೂ ಬೆಲೆ ಏರಿಕೆ ಸೂಚ್ಯಂಕದ ಮೇರೆಗೆ ಪಾಯಿಂಟ್ಗೆ 4 ಪೈಸೆಯಂತೆ ತುಟ್ಟಿಭತ್ತೆ ಸೇರಿ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ನೀಡಬೇಕಿದ್ದರೂ ಈವರೆಗೂ ನೀಡಿಲ್ಲ. 2025ರ ಫೆಬ್ರವರಿಯಲ್ಲಿ ಹೊಸ ಕನಿಷ್ಠ ಕೂಲಿಯನ್ನು ಕರ್ನಾಟಕ ಸರಕಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಕನಿಷ್ಠ ಕೂಲಿ ನಿಗದಿಗೆ ಸೆಕ್ಷನ್ 5(1ಎ) ಅನ್ವಯ ಸಮಿತಿ ರಚಿಸಿದ್ದು, ಸಮಿತಿಯ ತೀರ್ಮಾನದಂತೆ 2024ರ ಎಪ್ರಿಲ್ 1ರಿಂದ ಸಾವಿರ ಬೀಡಿಗೆ 270 ರೂ. ಕನಿಷ್ಠ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್ ಗೆ 3 ಪೈಸೆಯಂತೆ ಅಧಿಸೂಚನೆ ನೀಡಿತ್ತು. ಆ ಪ್ರಕಾರ ಸಾವಿರ ಬೀಡಿಗೆ 301.92 ರೂ.ಗಳಂತೆ ಬೀಡಿ ಕಾರ್ಮಿಕರಿಗೆ ಮಾಲಕರು ವೇತನ ನೀಡಬೇಕು. ಆದರೆ ಬೀಡಿ ಮಾಲಕರು ಸಾವಿರ ಬೀಡಿಗೆ 284.88 ರೂ.ನಂತೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. 'ಕಾರ್ಮಿಕ ಇಲಾಖೆಯು ಬೆಂಗಳೂರಿನ ವಿಕಾಸಸೌಧದಲ್ಲಿ ನ.27ರಂದು ಸಂಜೆ 4 ಗಂಟೆಗೆ ಸಭೆ ಆಯೋಜಿಸಿದೆ. ಸಭೆಯಲ್ಲಿ ಸಿಐಟಿಯುನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆದರೆ ಧರಣಿ ಮುಂದುವರಿಯಲಿದೆ. ಕಳೆದ ಆರು ವರ್ಷಗಳಿಂದ ಬೀಡಿ ಕಾರ್ಮಿಕರು ಬಾಕಿ ಕನಿಷ್ಠ ವೇತನಕ್ಕಾಗಿ ಕಾಯುತ್ತಿದ್ದಾರೆ. ಅದು ಸಿಗುವವರೆಗೆ ಧರಣಿ ಮುಂದುರಿಸಲಾಗುವುದು ಎಂದು ನಾಯಕರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ