ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ಆಗುತ್ತಿದ್ದು, ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ಈ ಹಿಂದೆ ಚುನಾವಣೆಯಲ್ಲಿ ಗೆದ್ದಾಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಸರಿಸಮನಾಗಿ ಎರಡೂವರೆ ವರ್ಷಗಳ ಅಧಿಕಾರವನ್ನು ಹಂಚಲಾಗಿದೆ ಎನ್ನುತ್ತಿರುವ ಡಿಕೆಶಿ ಪರ ಶಾಸಕರು ಡಿಕೆಯವರನ್ನು ಮುಖ್ಯಮಂತ್ರಿ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಡಿಕೆಶಿ ಪರ ಬ್ಯಾಟ್ ಬೀಸುವ ಶಾಸಕರು ದೆಹಲಿಗೆ ಪ್ರಯಾಣ ಕೈಗೊಂಡು ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದು, ಸಿಎಂ ಬದಲಾವಣೆ ಚಾಲ್ತಿಯಲ್ಲಿದೆಯಾ ಎಂಬ ಅನುಮಾನಗಳನ್ನು ಮೂಡಿಸಿವೆ.
ಹೀಗಿರುವಾಗ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್‌ಗೆ 50 ಶಾಸಕರ ಬೆಂಬಲ ಸಿಕ್ಕರೆ ಸಾಕು ಅವರು ಅದನ್ನು ಹೈಕಮಾಂಡ್‌ಗೆ ತೋರಿಸಿ ತಕ್ಷಣವೇ ಸಿಎಂ ಆಗಬಹುದು ಎಂದು ಹೇಳಿದ್ದು, ಅದೇ ಸಮಯದಲ್ಲಿ ಡಿಕೆಶಿ ಸಿಎಂ ಆಗಲಿ ಎಂದು ಡಿಕೆ ಪರ ಶಾಸಕರು ಸಹಿ ಸಂಗ್ರಹ ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮಧ್ಯ ಪ್ರವೇಶಿಸದ ಕಾಂಗ್ರೆಸ್ ಹೈಕಮಾಂಡ್ ಬಲಿಷ್ಟವಾಗಿಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಜಮೀರ್ ಅಹ್ಮದ್ ಖಾನ್ ಆದಷ್ಟು ಬೇಗ ಹೈಕಮಾಂಡ್ ಇದಕ್ಕೆ ಪ್ರತಿಕ್ರಿಯಿಸಿ ಸ್ಪಷ್ಟ ಚಿತ್ರಣವನ್ನು ಮುಂದಿಡಲಿದೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್‌ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಕಿಡಿಕಾರಿದ ಜಮೀರ್ ರಾಜ್ಯದ ಇತಿಹಾಸದಲ್ಲಿಯೇ ಒಮ್ಮೆಯೂ ಸಹ ಬಿಜೆಪಿ ಸ್ಪಷ್ಟ ಬಹುಮತ ಪಡೆದಿಲ್ಲ, 2008ರಲ್ಲಿ ಬಹುಮತ ಇರಲಿಲ್ಲ, ಆ ಸಂದರ್ಭದಲ್ಲಿ ಆಪರೇಷನ್ ಕಮಲ ಮಾಡಿ ಕುದುರೆ ವ್ಯಾಪಾರ ಮಾಡಿದ್ದು ಅವರೇ. ಹೀಗೆ ಅವರಿಗೆ ಕುದುರೆ ವ್ಯಾಪಾರದ ಅಭ್ಯಾಸವಿದೆ ಎಂದರೆ ಎಲ್ಲರೂ ಹಾಗೆಯೇ ಇರುವುದಿಲ್ಲ ಎಂದರು. ಇನ್ನು ಡಿಕೆ ಶಿವಕುಮಾರ್ ಪರವಾಗಿ 50ರಿಂದ 60 ಶಾಸಕರ ಇದ್ದಾರೆ ಎಂಬ ಆರೋಪಕ್ಕೆ ತಿರುಗೇಟು ಕೊಟ್ಟ ಜಮೀರ್ ಡಿಕೆ ಶಿವಕುಮಾರ್ ಪರ ಕೇವಲ 60 ಶಾಸಕರಲ್ಲ 139 ಶಾಸಕರಿದ್ದಾರೆ, ಹಾಗೆಯೇ ಸಿದ್ದರಾಮಯ್ಯ ಪರವೂ 139 ಶಾಸಕರಿದ್ದಾರೆ ಹಾಗೂ ಹೈಕಮಾಂಡ್ ಪರವೂ 139 ಶಾಸಕರಿದ್ದಾರೆ. ನಮ್ಮದು ಹೈಕಮಾಂಡ್ ನಿಯಮ ಪಾಲಿಸುವ ಪಕ್ಷ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.