ಲಕ್ಷ್ಮೇಶ್ವರ: ಎರಡ್ಮೂರು ದಿನದಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಎನ್. ಶ್ರೀಧರ ಅವರು ಶುಕ್ರವಾರ ಘೋಷಿಸಿದ ಹಿನ್ನೆಲೆಯಲ್ಲಿ ಕುಮಾರ ಮಹಾರಾಜರು ಒಂದು ವಾರದಿಂದ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್. ಶ್ರೀಧರ ಮಾತನಾಡಿ, '10 ಲಕ್ಷ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಎರಡ್ಮೂರು ದಿನಗಳಲ್ಲಿ ಖರೀದಿ ಕೇಂದ್ರ ಆರಂಭವಾಗಲಿದೆ' ಎಂದು ಹೇಳಿದರು.
ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ ಹಾಗೂ ನಾಗರಾಜ ಚಿಂಚಲಿ ಮಾತನಾಡಿ, 'ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ, ಕುಮಾರ ಮಹಾರಾಜರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅವರ ಪ್ರಾರ್ಥನೆ ಫಲವಾಗಿ ಸರ್ಕಾರ ಖರೀದಿ ಕೇಂದ್ರ ತೆರೆಯಲು ಒಪ್ಪಿಗೆ ನೀಡಿದೆ. ಈ ಜಯ ಮಹಾರಾಜರಿಗೆ ಸಲ್ಲುತ್ತದೆ' ಎಂದು ಹೇಳಿದರು. ವಕೀಲರಾದ ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ ಮಾತನಾಡಿ, 'ಒಂದು ವಾರ ನಿರಂತರವಾಗಿ ರೈತರು ನಡೆಸಿದ ಧರಣಿಯು ಸರ್ಕಾರದ ಕಣ್ಣು ತೆರೆಸಿದೆ. ಅನ್ನದಾತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಸಿಗುತ್ತದೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿ' ಎಂದು ತಿಳಿಸಿದರು. ಸ್ವಾಮೀಜಿ ಅವರೊಂದಿಗೆ ಉಪವಾಸ ಕೈಗೊಂಡಿದ್ದ ಬಸಣ್ಣ ಬೆಂಡಿಗೇರಿ ಹಾಗೂ ಪೂರ್ಣಾಜಿ ಖರಾಟೆ ಮಾತನಾಡಿ, 'ರೈತರು ಹೋರಾಟಕ್ಕಿಳಿಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು, ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು' ಎಂದು ಆಗ್ರಹಿಸಿದರು.