image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಹಾರಾಷ್ಟ್ರದಲ್ಲಿ ಕಬ್ಬಿಗೆ ಅಧಿಕ ದರ : ರಾಜ್ಯದಲ್ಲಿ ರೈತರ ವಲಸೆ

ಮಹಾರಾಷ್ಟ್ರದಲ್ಲಿ ಕಬ್ಬಿಗೆ ಅಧಿಕ ದರ : ರಾಜ್ಯದಲ್ಲಿ ರೈತರ ವಲಸೆ

ಬೆಳಗಾವಿ : ಕಬ್ಬಿಗೆ ಉತ್ತಮ ರಿಕವರಿ ಹಾಗೂ ಎಫ್‌ಆರ್‌ಪಿ ದರ ಕೊಡುತ್ತಿರುವ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳತ್ತ ರಾಜ್ಯದ ಕಬ್ಬು ಬೆಳೆಗಾರರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿರುವ ಕಾರಣ ರಾಜ್ಯದ ಸಣ್ಣ ಪುಟ್ಟ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಲಭ್ಯತೆ ಕೊರತೆಯಿಂದ ಬಳಲುತ್ತಿವೆ. ಮಹಾರಾಷ್ಟ್ರದಲ್ಲಿ ಎಫ್‌ಆರ್‌ಪಿ ದರ ಹಾಗೂ ಪಾವತಿ ವ್ಯವಸ್ಥೆಯು ರಾಜ್ಯಕ್ಕೆ ಹೋಲಿಸಿದರೆ ಉತ್ತಮವಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರಿಕವರಿ ಪ್ರಮಾಣವನ್ನು ಕಡಿಮೆ ತೋರಿಸುವ ಮೂಲಕ ರೈತರನ್ನು ವಂಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಒಂದಿಷ್ಟು ಲಾಭದ ಆಸೆಯಿಂದ ರೈತರು ಮಹಾರಾಷ್ಟ್ರ ಕಾರ್ಖಾನೆಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ, 10.25ರಿಕವರಿ ಇರುವ ಪ್ರತಿ ಟನ್‌ ಕಬ್ಬಿಗೆ 3200ರೂ ಎಫ್‌ಆರ್‌ಪಿ ದರ ನೀಡಬೇಕು. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ತಲಾ 50ರೂ.ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಆದಾಗ್ಯೂ, ಕಾರ್ಖಾನೆ ಮಾಲೀಕರು ಹಿಂದೇಟು ಹಾಕುತ್ತಿರುವುದು ರೈತರನ್ನು ಮಹಾರಾಷ್ಟ್ರದತ್ತ ಮುಖ ಮಾಡಲು ಕಾರಣವಾಗಿದೆ.

ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡುವ ಸಂಬಂಧ ಬೆಳಗಾವಿಯಲ್ಲಿ ರೈತರು ಹೋರಾಟ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಸುದೀರ್ಘ ಸಭೆ ನಡೆಸಿದ ಬಳಿಕ ರೈತರ ಹೋರಾಟಗಾರರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿತ್ತು. ಆದರೂ, ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪ್ರತಿ ಟನ್‌ಗೆ 3500 ಎಫ್‌ಆರ್‌ಪಿ ದರ ನೀಡುವಂತೆ ರೈತರು ಪಟ್ಟು ಹಿಡಿದಿದ್ದರು. ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹೊತ್ತಿಸಿದ್ದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಹಾರಾಷ್ಟ್ರದ ಕಾರ್ಖಾನೆಗಳು ಪ್ರತಿ ಟನ್‌ಗೆ 200 ರಿಂದ 300 ರೂ. ಹೆಚ್ಚುವರಿ ದರ ನೀಡುತ್ತಿವೆ. ಇದರಿಂದಾಗಿ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಗಡಿ ಭಾಗದ ಜಿಲ್ಲೆಗಳ ರೈತರು ಲಾಭದ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ರಾಜ್ಯದ ಗಡಿಭಾಗದಿಂದ ಕೇವಲ 10-15 ಕಿ.ಮೀ. ಅಂತರದಲ್ಲಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 3500 ರಿಂದ 3618 ರೂ. ವರೆಗೆ ದರ ಘೋಷಿಸಿವೆ. ಈ ದರ ವ್ಯತ್ಯಾಸದಿಂದಾಗಿ ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಗಡಿ ದಾಟುತ್ತಿದ್ದಾರೆ. ಗಡಿಭಾಗದ ಹಲವು ಕಬ್ಬು ಬೆಳೆಗಾರರು ತಮ್ಮ ಬೆಳೆಯನ್ನು ರಾಜ್ಯದೊಳಗಿನ ಕಾರ್ಖಾನೆಗಳಿಗೆ ನೀಡುವುದಕ್ಕಿಂತ ನೆರೆ ರಾಜ್ಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಾಗಿ ಸಾಗಿಸುತ್ತಿದ್ದಾರೆ. ಪ್ರತಿ ವರ್ಷ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕುಗಳಿಂದಲೇ ಅಂದಾಜು 10 ಲಕ್ಷ ಟನ್‌ಗಳಷ್ಟು ಕಬ್ಬು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಸಾಗಣೆಯಾಗುತ್ತದೆ. ಅಂತೆಯೇ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರು ನೆರೆ ರಾಜ್ಯದ ಕಡೆ ಹೋಗುತ್ತಿದ್ದಾರೆ. ಇದು ರಾಜ್ಯದ ಸ್ಥಳೀಯ ಸಕ್ಕರೆ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುತ್ತಿದೆ. ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಹೆಚ್ಚಿನ ಕಬ್ಬಿನ ಅವಶ್ಯಕತೆಯಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಅಲ್ಲಿನ ಕಾರ್ಖಾನೆಗಳು, ರಾಜ್ಯದ ರೈತರಿಗೆ ಹೆಚ್ಚಿನ ದರ ನೀಡಿ ಆಕರ್ಷಿಸುತ್ತಿವೆ. ರಾಜ್ಯದ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ದರ ಘೋಷಿಸುವುದಿಲ್ಲ. ಘೋಷಿಸಿದರೂ ಮಹಾರಾಷ್ಟ್ರಕ್ಕೆ ಹೋಲಿಸಿದರೆ ದರ ತೀರಾ ಕಡಿಮೆ. ಸಾಗಾಟದ ಖರ್ಚು ಹೆಚ್ಚಾದರೂ ಅಲ್ಲಿ ಉತ್ತಮ ಬೆಲೆ ಸಿಗುವುದರಿಂದ ನಮಗೆ ಲಾಭ ಉಳಿಯುತ್ತದೆ. ಹೀಗಾಗಿ ನಾವು ಅಲ್ಲಿಗೆ ಕಬ್ಬು ಸಾಗಿಸುತ್ತಿದ್ದೇವೆ. ರಾಜ್ಯದ ಕಾರ್ಖಾನೆಗಳು ಸಹ ಸ್ಪರ್ಧಾತ್ಮಕ ದರ ನೀಡಿದರೆ, ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ಹೇಳಿಕೊಡಿದ್ದಾರೆ.

ಕೇವಲ ದರ ಮಾತ್ರವಲ್ಲ, ಮಹಾರಾಷ್ಟ್ರದ ಕಾರ್ಖಾನೆಗಳು ನೀಡುವ ಇತರ ಸೌಲಭ್ಯಗಳು ಕೂಡ ರೈತರನ್ನು ಆಕರ್ಷಿಸುತ್ತಿವೆ. ಹಲವು ಮಹಾರಾಷ್ಟ್ರದ ಕಾರ್ಖಾನೆಗಳು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ತಾವೇ ಭರಿಸುತ್ತವೆ ಅಥವಾ ಅದಕ್ಕೆ ವ್ಯವಸ್ಥೆ ಮಾಡುತ್ತವೆ. ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಖರೀದಿಗೆ ಬಡ್ಡಿ ರಹಿತ ಮುಂಗಡ ಹಣವನ್ನು ನೀಡಲಾಗುತ್ತದೆ. ಇದಲ್ಲದೆ, ಕೆಲವು ಕಾರ್ಖಾನೆಗಳು ರೈತ ಸದಸ್ಯರಿಗೆ ಆರೋಗ್ಯ ವಿಮೆ ಮತ್ತು ಆರ್ಥಿಕ ಸಹಾಯದಂತಹ ಸೌಲಭ್ಯಗಳನ್ನೂ ಒದಗಿಸುತ್ತವೆ. ರೈತರಿಗೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳಿಗಾಗಿ ಬಡ್ಡಿ ರಹಿತ ಮುಂಗಡ ಹಣವನ್ನು ನೀಡಲಾಗುತ್ತದೆ. ಅಲ್ಲದೇ, ರೈತ ಸದಸ್ಯರಿಗೆ ಆರೋಗ್ಯ ವಿಮೆ ಮತ್ತು ಆರ್ಥಿಕ ಸಹಾಯದಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ. ಮಹಾರಾಷ್ಟ್ರದ ಕಾರ್ಖಾನೆಗಳು ಕಬ್ಬು ಪೂರೈಸಿದ ಕೆಲವೇ ದಿನಗಳಲ್ಲಿ ಹಣ ಪಾವತಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ನಿದರ್ಶನಗಳಿವೆ.

Category
ಕರಾವಳಿ ತರಂಗಿಣಿ