ಮುಧೋಳ: ಹಲವು ದಿನಗಳಿಂದ ನಗರದಲ್ಲಿ ಕಬ್ಬು ದರ ನಿಗದಿ ಹಾಗೂ ಬಾಕಿ ವಸೂಲಿಗಾಗಿ ನಡೆಯುತ್ತಿದ್ದ ಹೋರಾಟವು ಸಂಧಾನ ಸಭೆಯ ಮೂಲಕ ಯಶಸ್ವಿಯಾಗಿದೆ. ನಗರದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ನೇತೃತ್ವದಲ್ಲಿ ನಡೆದ ಸಭೆ ಸಫಲವಾಗಿದೆ. ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ ಬಸವಂತಪ್ಪ ಕಾಂಬಳೆ, ಆರೇಳು ವರ್ಷದ ಬಾಕಿಯನ್ನು ಇನ್ನೆರಡು ದಿನದಲ್ಲಿ ಜಮಾ ಮಾಡುವುದಾಗಿ ಸಕ್ಕರೆ ಸಚಿವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ತಿಳಿಸಿದರು. ಸರ್ಕಾರ ನಿಗದಿ ಪಡಿಸಿರುವ ದರವನ್ನು ಹೆಚ್ಚಿಸುವಂತೆ ಬೆಳಗಾವಿ ಅಧಿವೇಶನದ ವೇಳೆ ಸುವರ್ಣ ಸೌಧದ ಎದುರು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು. ರಿಕವರಿಗೆ ನಿಯಮವನ್ನು ಬಿಟ್ಟು ಎಲ್ಲ ರೀತಿಯ ಕಬ್ಬಿಗೆ ಒಂದೇ ರೀತಿಯ ದರ ನಿಗದಿಗೆ ಕಾರ್ಖಾನೆ ಮಾಲೀಕರು ಒಪ್ಪಿದ್ದು ಕಬ್ಬು ಸಾಗಣೆಯಾದ 14ದಿನದಲ್ಲಿ ರೈತರ ಖಾತೆಗೆ ಹಣ ಜಮಾವಣೆಯಾಗಲಿದೆ. ಇನ್ನೋರ್ವ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಘಟನೆಯನ್ನು ನಾವು ಖಂಡಿಸುತ್ತೇವೆ. ನಮ್ಮ ಹೋರಾಟಗಾರರು ಇಂತಹ ಕೆಲಸ ಮಾಡುವುದಿಲ್ಲ ಕಾರ್ಖಾನೆಯ ಕೆಲ ಗೂಂಡಾಗಳು ಇಂತಹ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಖಾನೆಯವರು ಇಂತಹ ಘಟನೆಗೆ ಅವಕಾಶ ನೀಡಬಾರದು ಎಂದು ಹೇಳಿದರು. ಈ ವೇಳೆ ಹೋರಾಟಗಾರರಾದ ದುಂಡಪ್ಪ ಯರಗಟ್ಟಿ, ಎ.ಜಿ. ಪಾಟೀಲ, ಸುರೇಶ ಚಿಂಚಲಿ ಸೇರಿದಂತೆ ಇತರರು ಇದ್ದರು.