ಬೆಂಗಳೂರು : ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸುವ 'ಗೃಹ ಆರೋಗ್ಯ' ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯಾದ್ಯಂತ ರಕ್ತದೊತ್ತಡ, ಮಧುಮೇಹಕ್ಕೆ 5 ಲಕ್ಷಕ್ಕೂ ಹೆಚ್ಚು ಜನ ಉಚಿತ ಔಷಧ ಪಡೆಯುತ್ತಿದ್ದಾರೆ. ಆ ಮೂಲಕ ಹೃದಯಾಘಾತ, ಕಿಡ್ನಿ ವೈಫಲ್ಯ, ಸ್ಟ್ರೋಕ್‌ನಂತಹ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳಿಗೆ ಮೂಲದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 'ಗೃಹ ಆರೋಗ್ಯ' ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿ ಬದಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
'ಗೃಹ ಆರೋಗ್ಯ' ಯೋಜನೆಗೆ ಕೋಲಾರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಬಳಿಕ ರಾಜ್ಯಾದ್ಯಂತ ವಿಸ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಯೋಜನೆಗೆ ಕೆಲವು ಬದಲಾವಣೆ ತಂದಿದ್ದರು. ರಕ್ತದೊತ್ತಡ, ಡಯಾಬಿಟಿಸ್ ಜೊತೆಗೆ ಕ್ಯಾನ್ಸರ್, ಮಾನಸಿಕ ಕಾಯಿಲೆಗಳು, ಸೇರಿದಂತೆ 14 ಬಗೆಯ ಕಾಯಿಲೆಗಳ ತಪಾಸಣೆ ನಡೆಸಲು ಸೂಚಿಸಿದ್ದರು. ಇದರಂತೆ ಇದೀಗ ರಾಜ್ಯಾದ್ಯಂತ ಸದ್ದಿಲ್ಲದೇ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುತ್ತಿದೆ. ಯೋಜನೆಯಡಿ 326703 ರಕ್ತದೊತ್ತಡ ಕಾಯಿಲೆ ಹೊಂದಿರುವ ಜನ ಉಚಿತವಾಗಿ ಔಷಧಿಯನ್ನ ಪಡೆಯುತ್ತಿದ್ದಾರೆ. ಅಲ್ಲದೆ, 2,36,759 ಮಧುಮೇಹದ ರೋಗಿಗಳಿಗೆ ಉಚಿತವಾಗಿ ಔಷಧಿ ಪೂರೈಸಲಾಗುತ್ತಿದೆ. ಪ್ರತಿ ಎರಡು ತಿಂಗಳಿಗೊಮ್ಮ ಸ್ಥಳೀಯ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ರೋಗಿಗಳು ಉಚಿತವಾಗಿ ಔಷಧಿ ಪಡೆಯಲು ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಸುಮಾರು 185 ಕೋಟಿ ವೆಚ್ಚದ 'ಗೃಹ ಆರೋಗ್ಯ' ಯೋಜನೆಯಡಿ ರಕ್ತದೊತ್ತಡ, ಡಯಾಬಿಟಿಸ್ ರೋಗಿಗಳಿಗೆ ನಿರಂತರವಾಗಿ ಉಚಿತ ಔಷಧಿ ಒದಗಿಸಲು ಈಗಾಗಲೇ 115 ಕೋಟಿ ಮೌಲ್ಯದ ಔಷಧಿಗಳ ಖರೀದಿ ಪ್ರಕ್ರೀಯೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆ ಮೂಲಕ ಹೃದಯಾಘಾತ, ಕಿಡ್ನಿ ವೈಫಲ್ಯ, ಸ್ಟ್ರೋಕ್‌ನಂತಹ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳಿಗೆ ಮೂಲದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 'ಗೃಹ ಆರೋಗ್ಯ' ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿ ಬದಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.