ಮೈಸೂರು : ಭಾರತ ಎಂದಿಗೂ ಹಿಂದೂರಾಷ್ಟ್ರ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತ ಎಂದಿಗೂ ಹಿಂದೂರಾಷ್ಟ್ರ ಆಗೋದಿಲ್ಲ. ನಮ್ಮದು ಬಹುತ್ವದ ರಾಷ್ಟ್ರ. ಹಲವು ಕಲೆ ಸಂಸ್ಕೃತಿ ಭಾಷೆ ಧರ್ಮಗಳಿರುವ ದೇಶ. ಆರ್ ಎಸ್ ಎಸ್ ಸಂಘಪರಿವಾರ ಬಹಳ ದಿನಂದಿಂದ ಈ ರೀತಿ ಹೇಳುತ್ತಿದೆ. ಆದರೆ ಇದು ಎಂದಿಗೂ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ. ದೆಹಲಿ ಬಾಂಬ್ ಸ್ಟೋಟ ಪ್ರಕರಣ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದು ಬಿಜೆಪಿ ವಿರುದ್ಧವಾಗಿ ಪರಿಣಾಮ ಬೀರಲಿದೆ. ಸದ್ಯ ಬಾಂಬ್ ಸ್ಟೋಟದಲ್ಲಿ ಸತ್ತವರಿಗೆ ನನ್ನ ಸಂತಾಪ ಇದೆ. ಭದ್ರತಾ ವೈಫಲ್ಯದ ಬಗ್ಗೆ ಈಗಲೇ ಏನೂ ಹೇಳಲ್ಲ ಎಂದು ಸಿಎಂ ಹೇಳಿದ್ದಾರೆ.
ನವೆಂಬರ್ ಕ್ರಾಂತಿ ದಿನ ಹತ್ತಿರವಾಗುತ್ತಿದ್ದಂತೆ ಮಹತ್ವದ ಬೆಳವಣಿಗೆ ಕೂಡ ನಡೆದಿದೆ. ಹೈಕಮಾಂಡ್ ಭೇಟಿಗೆ ಸಿಎಂ ಪ್ರಯತ್ನ ಮಾಡಿದ್ದಾರೆ. ಆದರೆ, ಹೈಕಮಾಂಡ್ ಸಮಯ ಇನ್ನೂ ಸಿಕ್ಕಿಲ್ಲ. ದೆಹಲಿ ಪ್ರವಾಸ ಒಂದೇ ದಿನಕ್ಕೆ ಮೊಟಕುಗೊಂಡಿದೆ. ಈ ಬಗ್ಗೆ ಖುದ್ದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ನವೆಂಬರ್ 15ಕ್ಕೆ ದೆಹಲಿಗೆ ಹೋಗುತ್ತೇನೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ. ಅದಕ್ಕಾಗಿ ದೆಹಲಿಗೆ ಹೋಗುತ್ತೇನೆ. ಅಂದೇ ಹೋಗಿ ಅಂದೇ ವಾಪಸ್ ಬರುವ ಪ್ಲ್ಯಾನ್ ಇದೆ. ರಾಹುಲ್ ಗಾಂಧಿ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಬರುತ್ತೇನೆ. ರಾಹುಲ್ ಗಾಂಧಿ ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸಿಎಂ ಪ್ರಗತಿ ಪರಿಶೀಲನಾ ಸಭೆ ಕೂಡ ನಡೆಸಿದ್ದಾರೆ. ಸತತ 10 ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸಿದರು. ಮೈಸೂರಿನ ಜನ ಸಮಸ್ಯೆ ಪರಿಹಾರಕ್ಕೆ ಬೆಂಗಳೂರಿಗೆ ಬರ್ತಾರೆ. ಜನ ರಾತ್ರಿ ಹಗಲು ನನಗಾಗಿ ಕಾಯುತ್ತಾರೆ. ಕಂದಾಯ ಇಲಾಖೆ ಸಂಬಂಧದ ಪರಿಹಾರಕ್ಕೆ ನನ್ನ ಬಳಿ ಬರುತ್ತಿದ್ದಾರೆ. ನಾನು ಮೈಸೂರು ಜಿಲ್ಲಾಡಳಿತಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ. ಜನರ ಸಮಸ್ಯೆ ಪರಿಹಾರಕ್ಕೆ ಮುತುವರ್ಜಿ ವಹಿಸಿ ಎಂದು ಹೇಳಿದ್ದೇನೆ. ಅನಗತ್ಯವಾಗಿ ಜನರು ಸರಕಾರಿ ಕಚೇರಿಗೆ ಅಲೆಸುವುದು ಅಪರಾಧ. ಅಧಿಕಾರಿಗಳು ಸಮಸ್ಯೆ ಬಗೆಹರಿಸಿದರೆ ಜನ ನನ್ನ ಬಳಿ ಬರುವುದು ಕಡಿಮೆ ಆಗುತ್ತದೆ. ತಾಲೂಕು ಕೇಂದ್ರಗಳಲ್ಲಿ ತಾಲ್ಲೂಕು ಅಧಿಕಾರಿಗಳು ವಾಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.