ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತೀ ವೃಷ್ಟಿಯಿಂದ ಬೆಳೆಗಳು ಹಾನಿಯಾಗಿ ರೈತರು ನಷ್ಟ ಅನುಭವಿಸಿದ್ದರೆ, ಇನ್ನೊಂದೆಡೆ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ ಫಸಲು ಕೈಸೇರುವ ವೇಳೆ ದರ ಕುಸಿತ ಕಂಡಿರುವುದು ರೈತರನ್ನು ಮತ್ತೂಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದು, ಕೂಡಲೇ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಕೂಗು ರೈತ ಸಮೂಹದಿಂದ ಹೆಚ್ಚುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆಗಾಗಿರುವ ಮೆಕ್ಕೆಜೋಳವನ್ನು ಅತಿವೃಷ್ಟಿಯ ಮಧ್ಯೆಯೂ ಈ ವರ್ಷ ಒಟ್ಟು ಸುಮಾರು 2.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಜಿಲ್ಲೆಯ ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ. 75ರಷ್ಟು ಗೋವಿನಜೋಳ ಬೆಳೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗೋವಿನ ಜೋಳದ ಬೆಲೆ ಕುಸಿದಿದೆ. ಪ್ರತಿ ಕ್ವಿಂಟಲ್‌ಗೆ ಸರಾಸರಿ 1,400 ರೂ. ದಿಂದ 1,900 ರೂ. ಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ಗೋವಿನಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 2,400 ರೂ. ಬೆಂಬಲ ಬೆಲೆ ಘೋಷಿಸಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಪ್ರಸಕ್ತ ವರ್ಷ ಅತೀವೃಷ್ಟಿ, ಮುಳ್ಳು ಸಜ್ಜೆ ಕಳೆಯಿಂದ ಮೆಕ್ಕೆಜೋಳಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶ ಲಭ್ಯವಾಗದೇ ಇಳುವರಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಪ್ರತಿ ಎಕರೆಗೆ ಸರಾಸರಿ 15-20 ಕ್ವಿಂಟಲ್ ಬರುವ ಇಳುವರಿ ಈ ವರ್ಷ 9-10 ಕ್ವಿಂಟಲ್‌ಗೆ ಕುಸಿದಿದೆ. ಅಲ್ಲದೇ ಕೋಯ್ಲಾದ ಬಳಿಕವೂ ಮಳೆ ಸುರಿಯುತ್ತಲೇ ಇರುವ ಕಾರಣ ಸಂಸ್ಕರಣೆಯ ಹಂತದಲ್ಲಿ ಬಹಳಷ್ಟು ಬೆಳೆಗೆ ಫಂಗಸ್ ಹಿಡಿದು ಹಾನಿಯಾಗಿದೆ. ಇನ್ನು, ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೂಲಿ ಸೇರಿ ಸರಾಸರಿ 10 ಸಾವಿರ ರೂ. ಮತ್ತು ನಿರ್ವಹಣೆಗೆ ಸರಾಸರಿ 5-8 ಸಾವಿರ ರೂ. ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಕ್ಕೆಜೋಳವೇ ಪ್ರತಿ ಕ್ವಿಂಟಲ್‌ಗೆ 1900 ರೂ. ದರವಿದ್ದರೆ ಸಾಮಾನ್ಯ ಮೆಕ್ಕೆಜೋಳ 1400 ರೂ. ಇದೆ. ಇನ್ನು ಫಂಗಸ್‌ನಿಂದ ಹಾನಿಯಾಗಿರುವ ಬೆಳೆಯನ್ನು 800 ರೂ. ಗೂ ಕೇಳುತ್ತಿಲ್ಲ. ಇದರಿಂದ ರೈತರು ಅಕ್ಷರಶಃ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಈ ವರ್ಷ ದರ ಕುಸಿತವಾಗಿರುವ ಕಾರಣ ಕೂಡಲೇ ಖರೀದಿ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಆದರೆ ಮೆಕ್ಕೆಜೋಳವನ್ನು ಪಡಿತರದ ಪಟ್ಟಿಯಲ್ಲಿ ಸೇರಿಸಿರುವುದೇ ಖರೀದಿ ಕೇಂದ್ರ ಆರಂಭಕ್ಕೆ ತೊಡಕಾಗುತ್ತಿದೆ ಎಂಬುದು ಕೆಲವು ರೈತ ಮುಖಂಡ ವಾದವಾಗಿದೆ. ಮೆಕ್ಕೆಜೋಳದಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಕಳೆದ ಕೆಲ ವರ್ಷಗಳ ಹಿಂದೆ ಅದನ್ನು ಪಡಿತರದ ಮೂಲಕ ವಿತರಿಸಲು ಕೇಂದ್ರ ಆಹಾರ ಇಲಾಖೆ ರಾಜ್ಯಗಳಿಗೆ ಆದೇಶ ಹೊರಡಿಸಿದೆ. ಒಂದೊಮ್ಮೆರಾಜ್ಯದಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ಸರ್ಕಾರ ಖರೀದಿಸಿದ ಮೆಕ್ಕೆಜೋಳವನ್ನು ಸ್ಥಳೀಯವಾಗಿಯೇ ಪಡಿತರದ ಮೂಲಕ ಜನರಿಗೆ ಮಾರಾಟ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಮೆಕ್ಕೆಜೋಳವನ್ನು ಅಡುಗೆಗೆ ಬಳಸುವುದಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರವೇ ಖರೀದಿ ಕೇಂದ್ರ ಆರಂಭಕ್ಕೆ ಮುಂದಾಗುತ್ತಿಲ್ಲ ಎಂಬುದು ರೈತ ಮುಖಂಡರ ಆರೋಪವಾಗಿದೆ.