ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಕಾಂಗ್ರೆಸ್ ಸರ್ಕಾರದ ನಿಯಮಕ್ಕೆ ಬಿಜೆಪಿ ತಡೆ ತಂದಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ನಿನಲ್ 2 ರಲ್ಲಿ ಸಾಮೂಹಿಕ ನಮಾಜ್ ಮಾಡಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಏರ್ಪೋರ್ಟ್‌ಗಳಲ್ಲಿ ಪ್ರಾರ್ಥನೆಗೆ ಪ್ರತ್ಯೇಕ ಕೊಠಡಿಗಳು ಇರುತ್ತವೆ. ಆದರೆ, ಇಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ತಮ್ಮ ಸರ್ಕಾರದ ನಿಲುವು. ಬೆಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಫ್ರೀಡಂ ಪಾರ್ಕ್ ಅನ್ನು ನಿಗದಿಪಡಿಸಿದಂತೆ, ಇಡೀ ರಾಜ್ಯಕ್ಕೆ ಈ ನಿಯಮವನ್ನು ವಿಸ್ತರಿಸಿದಾಗ ಬಿಜೆಪಿ ತನ್ನ ಅಂಗ ಸಂಸ್ಥೆಗಳ ಮೂಲಕ ಧಾರವಾಡದಲ್ಲಿ ಮಧ್ಯಂತರ ತಡೆ ತಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್ ಅಥವಾ ನಮಾಜ್, ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಅಗತ್ಯ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಿದ್ದರೆ, ಸಾರ್ವಜನಿಕರಿಗೆ ಕಷ್ಟವಾಗದಿದ್ದರೆ ಅನುಮತಿ ನೀಡಲಾಗುವುದು. ಈ ಬಗ್ಗೆ ಕಾನೂನನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾದಾಗ ಬಿಜೆಪಿಯೇ ಅಲ್ಲವೇ ತಡೆ ತಂದಿದ್ದು ಎಂದು ಖರ್ಗೆ ಪ್ರಶ್ನಿಸಿದರು.