ಹಾಸನ : ಜಿಲ್ಲೆಯಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಜನರ ಬಳಿಯೇ ಓಡಾಡುತ್ತಾ ಯಾರಿಗೂ ಏನೂ ಮಾಡುವುದಿಲ್ಲ ಎಂಬ ನಂಬಿಕೆ ಮೂಡಿಸಿದ್ದ ಭೀಮ, ಈಗ ಊರಿನ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ. ಗ್ರಾಮದೊಳಗೆ ಸಿಕ್ಕ ಸಿಕ್ಕದ್ದನ್ನು ಪುಡಿಗಟ್ಟಿ ಅಟ್ಟಹಾಸ ಮೆರೆಯುತ್ತಿರುವ ಬೃಹತ್ ಸಲಗ ಮತ್ತೊಂದು ಮದವೇರಿದ ಕಾಡಾನೆ ಜೊತೆಗಿನ ಕಾಳಗದಲ್ಲಿ ಒಂದು ದಂತವನ್ನೇ ಮುರಿದುಕೊಂಡಿದೆ. ಇದೀಗ ಭೀಮ ನಡೆಸುತ್ತಿರುವ ದಾಂಧಲೆ ಅರಣ್ಯ ಇಲಾಖೆಗೆ ದೊಡ್ಡ ತಲೆನೋವು ತರಿಸಿದೆ. ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿದೆಡೆ ಸಂಚಾರ ಮಾಡುತ್ತಾ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಮತ್ತೆ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಇಂದು ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜೊತೆಗೆ ಓಡಾಡುತ್ತಾ ಭೀತಿ ಸೃಷ್ಟಿಸಿದೆ. ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಎರಡೂ ಆನೆಗಳು ಕಾಳಗ ಶುರುಮಾಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ರೋಷಾವೇಶದಿಂದ ಗ್ರಾಮದೊಳಗೆ ಎಂಟ್ರಿಯಾದ ಭೀಮ, ನೀರಿನ ಟ್ಯಾಂಕರ್ ಪುಡಿಗಟ್ಟಿ, ಎತ್ತಿನ ಗಾಡಿಯಲ್ಲ ಎತ್ತಿ ಬಿಸಾಡಿ ರೌದ್ರಾವತಾರ ಪ್ರದರ್ಶನ ಮಾಡಿದೆ.ಕಾಡಾನೆ ಗ್ರಾಮದೊಳಗೆ ಬಂದಾಗ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಹಿಂಬಾಲಿಸಿದರೂ ಸಹ ಪಟಾಕಿ ಇಲ್ಲದೆ ಆನೆಯನ್ನು ಓಡಿಸಲು ಪರದಾಡಬೇಕಾಯಿತು.
ಕ್ಯಾಫ್ಟನ್ ಜೊತೆಗಿನ ಕಾದಾಟದಲ್ಲಿ ಭೀಮನ ಬಲಬಾಗದ ದಂತ ಸಂಪೂರ್ಣ ಮುರಿದು ಬಿದ್ದಿದ್ದು, ಮತ್ತೊಂದು ಆನೆಗೂ ಗಾಯಗಳಾಗಿವೆ. ಸದ್ಯ ದಂತ ಮುರಿದುಕೊಂಡು ಕಾಫಿತೋಟದಲ್ಲಿ ಸೇರಿಕೊಂಡಿರುವ ಸಲಗ ನರಳಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೆನ್ನಟ್ಟಿ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿದ್ದಾರೆ.