image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಬ್ಬು ಪ್ರತಿ ಟನ್‌ಗೆ 3300 ರೂ. ದರ ನೀಡಲು ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ

ಕಬ್ಬು ಪ್ರತಿ ಟನ್‌ಗೆ 3300 ರೂ. ದರ ನೀಡಲು ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು: ಪ್ರತಿ ಟನ್‌ ಕಬ್ಬಿಗೆ 3300 ರೂ. ನೀಡಲು ಸರ್ಕಾರ ಮಹತ್ವದ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಟನ್‌ಗೆ ನೀಡುವ 3300 ರೂಪಾಯಿಯಲ್ಲಿ ಕಾರ್ಖಾನೆಯಿಂದ 3250 ರೂ. ನೀಡಬೇಕು, ಉಳಿದಂತೆ ಸರ್ಕಾರದಿಂದ 50 ರೂ. ಸಬ್ಸಿಡಿ ನೀಡಲು ನಿರ್ಧಾರ ಮಾಡಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್ಪಿ ಹೆಚ್ಚಳ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು.

ಸಕ್ಕರೆಗೆ ಎಮ್‌ಎಸ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್‌ಆರ್ಪಿ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್‌ಆರ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ದಿನಾಂಕ 6-05-2025ರಂದು ಕಬ್ಬಿಗೆ ಎಫ್‌ಆರ್ಪಿ ನಿಗದಿಪಡಿಸಿದೆ. ಈ ಎಫ್‌ಆರ್ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಎಂಎಸ್ಪಿ ಹೆಚ್ಚಳ ಮಾಡಿಲ್ಲ.

ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ. ತೂಕದಲ್ಲಿ ಮೋಸ, ರಿಕವರಿ ಕಡಿಮೆ ತೋರಿಸುವುದು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಬಗೆಹರಿಸಲಾಗುವುದು ಎಂದು ರೈತ ಮುಖಂಡರಿಗೆ ತಿಳಿಸಿದ್ದೇವೆ.

ಕಬ್ಬಿನ11.25 ರಿಕವರಿಗೆ ರೂ.3250 ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ ರೂ.50 ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು ಎಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಇದರ ಮರು ಪರಿಶೀಲನೆ ನಡೆಸಲಾಗುವುದು. ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು.

Category
ಕರಾವಳಿ ತರಂಗಿಣಿ