ಬೆಳಗಾವಿ: ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ರೈತರು ಆರಂಭಿಸಿರುವ ಹೋರಾಟ ಮಂಗಳವಾರ ತೀವ್ರ ಸ್ವರೂಪ ಪಡೆಯಿತು. ರಸ್ತೆ ತಡೆ, ಪಾದಯಾತ್ರೆ, ಉಪವಾಸ ನಿರಶನ, ಬಂದ್ ಸೇರಿ ವಿವಿಧ ರೀತಿಯಲ್ಲಿ ಜನರು ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಡೆದಿರುವ ರೈತರ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿತು. ಮಂಗಳವಾರವೂ ಸಾವಿರಾರು ರೈತರು ಒಂದೆಡೆ ಸೇರಿದರು. ಇದೇ ರಾಜ್ಯ ಹೆದ್ದಾರಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಸಾಗಣೆ ವಾಹನಗಳು ಸಂಚರಿಸುತ್ತವೆ. ರೈತರು ಆರು ದಿನಗಳಿಂದ ಈ ಮಾರ್ಗ ಸಂಪೂರ್ಣ ಬಂದ್ ಮಾಡಿದ್ದಾರೆ. ಆಂಬುಲೆನ್ಸ್ ಬಿಟ್ಟರೆ ಯಾವುದೇ ವಾಹನಕ್ಕೂ ಅವಕಾಶ ನೀಡಿಲ್ಲ. ಟನ್‌ಗೆ ₹3,500ಕ್ಕಿಂತ ಒಂದು ರೂಪಾಯಿ ಕಡಿಮೆ ಘೋಷಿಸಿದರೂ ಒಪ್ಪುವುದಿಲ್ಲ. ರಾಜ್ಯ ಸರ್ಕಾರ ದರ ನಿಗದಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭವಾಗುವುದಕ್ಕೆ ಬಿಡುವುದೇ ಇಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬಿಜೆಪಿ ರಾಜ್ಯ ಘಟದಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ.ರಾಜೀವ್ ಸೇರಿ ಬಿಜೆಪಿಯ ಹಲವು ಮುಖಂಡರು ಮಂಗಳವಾರ ಧರಣಿಯಲ್ಲಿ ಪಾಲ್ಗೊಂಡರು. ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ ಜಿಲ್ಲೆಯ ರೈತರು ಕೂಡ ಅಪಾರ ಸಂಖ್ಯೆಯಲ್ಲಿ ಇಲ್ಲಿ ಸಮಾವೇಶಗೊಂಡಿದ್ದಾರೆ.
ರೈತರು ದುಡಿಮೆಯ ಹಣ ಸೇರಿಸಿ, ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದು ಕೂತಿದ್ದಾರೆ. ಜಿಲ್ಲೆಯ ಕೆಲವು ಮಠಾಧೀಶರು, ಮುಖಂಡರು, ಜನರೂ ಕಾಳು, ತರಕಾರಿ, ಅಕ್ಕಿ ನೀಡಿ ಹೋರಾಟಗಾರರ ಊಟಕ್ಕೆ ನೆರವಾಗುತ್ತಿದ್ದಾರೆ. ಊರಿನವರು ವಾಹನಗಳಲ್ಲಿ ನೀರಿನ ಬಾಟಲ್‌ಗಳನ್ನು ಪೂರೈಸಿ ರೈತರ ಬಾಯಾರಿಕೆ ಹೋಗಲಾಡಿಸುತ್ತಿದ್ದಾರೆ. ಮತ್ತೆ ಕೆಲವರು ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಇತ್ತ, ಬೆಳಗಾವಿ ನಗರದಲ್ಲಿ ವಕೀಲರು ಪಾದಯಾತ್ರೆ ಕೈಗೊಂಡರು. ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಅಥಣಿ, ಕಾಗವಾಡ, ಚಿಕ್ಕೋಡಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಗೋಕಾಕ ಮತ್ತಿತರ ತಾಲ್ಲೂಕುಗಳಲ್ಲಿ ಹೋರಾಟ ಮುಂದುವರೆದಿದೆ. ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕರೈತ ನಾಯಕ ಯಡಿಯೂರಪ್ಪ ಅವರ ಮಗನಾಗಿ ಇಲ್ಲಿಗೆ ಬಂದಿದ್ದೇನೆ. ರಾತ್ರಿಯಿಡೀ ರೈತರ ಜತೆಗೇ ಉಳಿದು ಹೋರಾಟ ಮಾಡುತ್ತೇನೆ ಎಂದರು.
ರೈತರ ಹೋರಾಟ ಬೆಂಬಲಿಸಿ ಕರೆ ನೀಡಿದ್ದ ಹುಕ್ಕೇರಿ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೇ ಬಸ್ ಆಟೊ ಸೇರಿ ಯಾವುದೇ ಖಾಸಗಿ ವಾಹನ ಕೂಡ ರಸ್ತೆಗೆ ಇಳಿಯಲಿಲ್ಲ. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದಲೇ ಅಂಗಡಿಗಳನ್ನು ಬಂದ್ ಮಾಡಿದರು. ಶಾಲೆ ಕಾಲೇಜು ವಿದ್ಯಾರ್ಥಿಗಳೂ ತರಗತಿಗಳಿಂದ ದೂರವೇ ಉಳಿದರು. ಹುಕ್ಕೇರಿ ವಕೀಲರ ಸಂಘವು ರೈತ ಸಂಘಕ್ಕೆ ₹25 ಸಾವಿರ ದೇಣಿಗೆ ನೀಡಿ ಪ್ರೋತ್ಸಾಹಿಸಿದೆ. ಗುರ್ಲಾಪುರ ಕ್ರಾಸ್ ಬಳಿ ರೈತರು ಧರಣಿ ಕುಳಿತು ವಾರ ಗತಿಸಿದೆ. ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ಬಂದಿಲ್ಲ. ದುರ್ಯೋಧನ ಐಹೊಳೆ ಹೊರತುಪಡಿಸಿ ಬೇರೆ ಶಾಸಕರೂ ಸುಳಿದಿಲ್ಲ' ಎಂದು ರೈತರು ಆಕ್ರೋಶ ಹೊರಹಾಕಿದರು. 'ಸಚಿವರು ಶಾಸಕರು ರಾಜಕಾರಣಿಗಳೇ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಹೀಗಾಗಿ ರೈತರು ಸತ್ತರೂ ಚಿಂತೆಯಿಲ್ಲ ಎಂಬಂತಿದೆ. ಸರ್ಕಾರ ಇದನ್ನು ಗಮನಿಸಬೇಕು' ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು. 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು 'ನಮ್ಮದೇ ಕಬ್ಬಿಗೆ ಮಹಾರಾಷ್ಟ್ರದಲ್ಲಿ ₹3410 ದರ ನೀಡಲಾಗುತ್ತಿದೆ. ಇಲ್ಲಿ ಕಾರ್ಖಾನೆಗಳು ₹3010 ನಿಗದಿಸಿವೆ. ಕಾರ್ಖಾನೆಗಳು ಪ್ರತಿ ವರ್ಷ ಲಾಭ ಹೆಚ್ಚಿಸಿಕೊಳ್ಳುತ್ತಲಿವೆ. ದಶಕದಿಂದ ರೈತರನ್ನು ಶೋಷಿಸುತ್ತಿವೆ. ಕಬ್ಬು ನಿಯಂತ್ರಣ ಮಂಡಳಿಗೆ ದರ ಹೆಚ್ಚಿಸುವ ಅಧಿಕಾರವಿದೆ. ಆದರೆ ರಾಜಕಾರಣಿಗಳು ಅದನ್ನೂ ಹಲ್ಲಿಲ್ಲದ ಹಾವಿನಂತೆ ಮಾಡಿದ್ದಾರೆ' ಎಂದೂ ಆಕ್ರೋಶ ಹೊರಹಾಕಿದರು. ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರ ಬಿ.ವೈ.ವಿಜಯೇಂದ್ರ ಮಾತನಾಡಿದರು