ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಸೋಮವಾರ ಜನಸಾಗರವೇ ಹರಿದುಬಂದಿತ್ತು. ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚದ ಪ್ರದರ್ಶನ ಗಮನ ಸೆಳೆಯಿತು. ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದಿಂದ ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳನ್ನು ತಿಳಿಸುವುದರ ಜೊತೆಗೆ ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ರೋಗ ಹರಡುವ ಮತ್ತು ಹರಡದ ಕೀಟಗಳು, ಅವುಗಳ ವಿಶೇಷತೆಗಳು ಹಾಗು ಇತರ ವಿವರಣೆಗಳನ್ನು ಕೃಷಿ ಮೇಳಕ್ಕೆ ಆಗಮಿಸಿದ ರೈತರಿಗೆ ನೀಡಲಾಗುತ್ತಿದೆ. ಕೀಟ ಪ್ರದರ್ಶನ ಮೇಳದಲ್ಲಿ ವಿವಿಧ ಕೀಟಗಳನ್ನು ಬಳಸಿ ಸಿದ್ಧಪಡಿಸಿರುವ 10ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ಜನರು ಕುತೂಹಲದ ಕಣ್ಣುಗಳಿಂದ ನೋಡಿದರು.
ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪಿರುವೆಯ ಫ್ರೈ ಮೊದಲಾದವುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಭಾರತದಲ್ಲಿ ಕೆಲವೆಡೆಯ ಆದಿವಾಸಿ ಸಮುದಾಯದವರು ಕೆಂಪಿರುವೆಯ ಫ್ರೈ ಮಾಡಿ ಸೇವಿಸುತ್ತಾರೆ. ನಮ್ಮ ದೇಶದಲ್ಲಿ ಕೀಟಗಳ ಸೇವನೆ ತುಂಬಾ ಕಡಿಮೆ. ಇದನ್ನು ಇಲ್ಲಿ ನೋಡಿದ್ದು ಅಚ್ಚರಿ ಮೂಡಿಸಿತು" ಎಂದು ಪ್ರದರ್ಶನ ವೀಕ್ಷಕರೋಬ್ಬರು ತಿಳಿಸಿದರು.