ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾದ ಘಟನೆ ನಡೆದಿದೆ. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಚಿವರ ಪಥಸಂಚಲನ ಪರಿವೀಕ್ಷಣೆಗೆ ವಾಹನವನ್ನು ಸಹ ಹೂಗಳಿಂದ ಅಲಂಕರಿಸಲಾಗಿತ್ತು. ತೆರೆದ ವಾಹನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ತೆರಳಬೇಕಿತ್ತು. ಕ್ರೀಡಾಂಗಣದಲ್ಲಿ ವಾಹನ ನಿಲ್ಲಿಸಿದಾಗ ಇಂಧನ ಸೋರಿಕೆಯಾಗುತ್ತಿರೋದು ಕಂಡು ಬಂದಿದೆ. ಇಂಧನ ಸೋರಿಕೆ ಹಿನ್ನೆಲೆಯಲ್ಲಿ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಯಿಂದ ಏರ್ ಗ್ಯಾಸ್ ಸಿಂಪಡಣೆ ಮಾಡಿದ್ದಾರೆ. ಇಂಧನ ಸೋರಿಕೆ ಹಿನ್ನೆಲೆ ಸಚಿವರ ಪಥಸಂಚಲನ ಪರಿವೀಕ್ಷಣೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯ್ತು. ಪರಿವೀಕ್ಷಣೆ ಇಲ್ಲದೇ ಪೊಲೀಸ್, ಕೆಎಸ್‌ಆರ್‌ಪಿ, ಎನ್‌ಸಿಸಿ, ಸ್ಕೌಟ್ ಆಯಂಡ್ ಗೈಡ್ಸ್ ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ದಿಢೀರ್ ಇಂಧನ ಸೋರಿಕೆಗೆ ಕಾರಣ ತಿಳಿದು ಬಂದಿಲ್ಲ.